ಪರೀಕ್ಷೆ ನಿರ್ವಹಣ ಟೆಂಡರ್ ಪ್ರಕ್ರಿಯೆಯಲ್ಲಿಯೂ 20 ಪರ್ಸೆಂಟ್ ಕಮಿಷನ್ ಆರೋಪ?

ಬೆಂಗಳೂರು, ಎ.18 : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿ ಬೆಳಗಾವಿಯ ಗುತ್ತಿಗೆ ದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ರಾಜ್ಯದ ಒಂದೊಂದೇ ಪರ್ಸಂಟೇಜ್ ಕಮಿಷನ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. 

ಇತ್ತೀಚೆಗಷ್ಟೇ ಮೇವು ಸರಬರಾಜುದಾರರಿಗೆ ಬಾಕಿ ಪಾವತಿಸಲು 40 ಪರ್ಸಂಟೇಜ್ ಕಮಿಷನ್‍ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಮತ್ತೊಂದು ಇಲಾಖೆಯ ಪರ್ಸಂಟೇಜ್ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಿವಿಧ ಪರೀಕ್ಷೆಗಳ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯಲ್ಲಿಯೂ 20 ಪರ್ಸೆಂಟ್ ಕಮಿಷನ್ ಕೇಳುತ್ತಿರುವ ಆರೋಪ ಮುನ್ನೆಲೆಗೆ ಬಂದಿದೆ.  

ಈ ವಿಚಾರವಾಗಿ ವಿವಿಧ ಪರೀಕ್ಷೆಗಳ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ 2022ರ ಜ. 14 ಮತ್ತು ಫೆ.11ರಂದು ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸೇವಾದಾರರು/ಹೊರಗುತ್ತಿಗೆ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಸಚಿವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು 20 ಪರ್ಸೆಂಟ್ ಕಮಿಷನ್‍ಗೆ ಬೇಡಿಕೆ ಇರಿಸಿದ್ದಾರೆ. ಹಾಗೂ ಸೇವಾದಾರರು 20 ಪರ್ಸೆಂಟ್ ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕೆ ಟೆಂಡರ್ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಲ್ಲದೆ ತಡೆಹಿಡಿದಿರುವ ಟೆಂಡರ್ ಅನ್ನು 2 ತಿಂಗಳಾದರೂ ಚಾಲನೆ ನೀಡಲು ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾನಿಲಯಗಳಿಗೆ ಸೂಚಿಸಿಲ್ಲ ಎಂಬ ವಿಚಾರ ವರದಿಯಾಗಿದೆ. 

ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಿಸಲು ತಂತ್ರಾಂಶ ಸೇವೆ ಒದಗಿಸುವ ಸೇವಾದಾರರು/ ಹೊರಗುತ್ತಿಗೆ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿರುವ ಸಚಿವ ಅಶ್ವತ್ಥ ನಾರಾಯಣ್ ಅವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಕಮಿಷನ್ ನೀಡದ ಹೊರತು ತಡೆಹಿಡಿದಿರುವ ಟೆಂಡರ್ ಪ್ರಕ್ರಿಯೆಗಳಿಗೆ ಚಾಲನೆ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರ ಸೂಚನೆ ಮೇರೆಗೆ ಅವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಸೇವಾದಾರರ ಸಂಸ್ಥೆಗಳಿಗೆ ಕಮಿಷನ್ ಬೇಡಿಕೆ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಂತ್ರಾಂಶ ಸೇವೆ ಒದಗಿಸುವ ಸೇವಾದಾರ/ಹೊರಗುತ್ತಿಗೆ ಸೇವಾ ಸಂಸ್ಥೆಗಳಿಗೆ ಖುದ್ದು ಭೇಟಿ ನೀಡಿ 20 ಪರ್ಸೆಂಟ್ ಕಮಿಷನ್‍ಗೆ ಬೇಡಿಕೆ ಇರಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಸಚಿವರ ಕಚೇರಿಯ ಉನ್ನತ ಅಧಿಕಾರಿ ಯೊಬ್ಬರು 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಖರ್ಚನ್ನು ಸರಿದೂಗಿಸಲು ಕಡ್ಡಾಯವಾಗಿ ಕಮಿಷನ್ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಕಮಿಷನ್ ಮೊತ್ತದಲ್ಲಿ ಕಡಿಮೆ ಮಾಡುವುದಿಲ್ಲ ಮತ್ತು ಯಾವುದೇ ರಿಯಾಯಿತಿಯನ್ನೂ ತೋರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆ ನಿರ್ವಹಣೆ ವ್ಯವಸ್ಥೆ ನಿರ್ವಹಿಸಲು ವಾರ್ಷಿಕವಾಗಿ ಸುಮಾರು 6ರಿಂದ 7 ಕೋಟಿ ರೂ.ವನ್ನು ಹೊರಗುತ್ತಿಗೆ ಸಂಸ್ಥೆಗೆ ನೀಡುತ್ತಿದೆ. ಗುತ್ತಿಗೆಯು ಮೂರು ವರ್ಷದ್ದಾಗಿದ್ದು, ಮೂರು ವರ್ಷಕ್ಕೆ ಸುಮಾರು 20 ಕೋಟಿ ರೂ. ಆಗಲಿದೆ. ಈ ಮೊತ್ತದಲ್ಲಿ ಶೇ.20ರಷ್ಟು ಕಮಿಷನ್ ಎಂದು ಲೆಕ್ಕಾಚಾರ ಮಾಡಿದರೆ 4.00 ಕೋಟಿ ರೂ. ಆಗಲಿದೆ. ಆರಂಭದಲ್ಲಿ ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ಮಾತನಾಡಿರುವ ಈ ಉನ್ನತ ಅಧಿಕಾರಿಯು ಈ ತರಹದ ಸೇವೆ ನೀಡುವ ಹಲವು ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಕಮಿಷನ್‍ನ್ನು ನೀಡಲು ಸೇವಾದಾರರು/ಹೊರಗುತ್ತಿಗೆ ಸಂಸ್ಥೆಯವರು ನಿರಾಕರಿಸಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಟೆಂಡರ್ ಪ್ರಕ್ರಿಯೆಯನ್ನೇ ತಡೆಹಿಡಿಯಲು ಸೂಚನೆ ನೀಡಿದ್ದಾರೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ. 20 ಪರ್ಸೆಂಟ್ ಕಮಿಷನ್ ನೀಡಿದ್ದರೆ ಇಷ್ಟೊತ್ತಿಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಕಮಿಷನ್ ನೀಡದ ಕಾರಣ ತಡೆಹಿಡಿದಿರುವ ಟೆಂಡರ್ ಪ್ರಕ್ರಿಯೆ ಮುಂದುವರಿದಿಲ್ಲ. ಇದು ವಿಶ್ವವಿದ್ಯಾನಿಲಯಗಳ ಪರೀಕ್ಷೆ ಚಟುವಟಿಕೆ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಅಧಿಕಾರಿಯವರು ಹೇಳಿದ್ದಾರೆ.

ರಾಣಿ ಚೆನ್ನಮ್ಮ ಮತ್ತು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷೆ ನಿರ್ವಹಣೆ ವ್ಯವಸ್ಥೆ (ಇಪಿಎಂಎಸ್) ತಂತ್ರಾಂಶ ಬಳಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆದಿದ್ದರ ಹಿನ್ನೆಲೆಯಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು 2022ರ ಫೆ.21ರಂದು ಟಿಪ್ಪಣಿ ಹೊರಡಿಸಿದ್ದರು. ಸೇವಾದಾರರು/ಹೊರಗುತ್ತಿಗೆ ಸಂಸ್ಥೆಗಳು ಶೇ.15-20ರಷ್ಟು ಕಮಿಷನ್ ನೀಡದೇ ಇದ್ದದ್ದಕ್ಕೆ ಇಡೀ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಲು ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿಯಲ್ಲಿ ಸೂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಈ ಟಿಪ್ಪಣಿಯಲ್ಲಿ ಇರುವ ಅಂಶ ಹೀಗಿದೆ. 
 ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷೆ, ವಿದ್ಯಾರ್ಥಿಗಳ ಮಾಹಿತಿ ಹಾಗೂ ಇನ್ನಿತರ ವಿಷಯಗಳನ್ನು ಒಳಗೊಂಡ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ವತಿಯಿಂದ ಅಭಿವೃದ್ಧಿಪಡಿಸಿ ಸರಕಾರದಿಂದ ಚಾಲನೆ ನೀಡಿರುವ ಯುಯುಸಿಎಂಎಸ್ ತಂತ್ರಾಂಶವನ್ನು ಈಗಾಗಲೇ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಬಳಸಲಾಗುತ್ತಿದೆ. ಅದರೆ ರಾಣಿ ಚೆನ್ನಮ್ಮ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಗಳಲ್ಲಿ ಇಪಿಎಂಎಸ್ ಎಂಬ ತಂತ್ರಾಂಶವನ್ನು ಬಳಸಲು ಟೆಂಡರ್ ಕರೆದಿರುವುದು ಗಮನಕ್ಕೆ ಬಂದಿದ್ದು ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಉಚಿತವಾಗಿ ಲಭ್ಯವಿರುವ ಯುಯುಸಿಎಂಎಸ್ ತಂತ್ರಾಂಶವನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಅವಶ್ಯವಾಗಿ ಅಳವಡಿಸಿಕೊಳ್ಳುವಂತೆ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ಅಗತ್ಯ ನಿರ್ದೇಶನ ನೀಡಲು ಅಂತೆಯೇ ಮಾರ್ಚ್ 2022 ರೊಳಗಾಗಿ ಯುಯುಸಿಎಂಎಸ್ ಜತೆಗೆ ಇ ಆಫೀಸ್ ಮತ್ತು ನ್ಯಾಡ್ ಅನ್ನು ಕಡ್ಡಾಯವಾಗಿ ಸಂಪೂರ್ಣ ಅನುಷ್ಠಾನಗೊಳಿಸಲು ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಕೈಗೊಂಡ ಕ್ರಮದ ಬಗ್ಗೆ ವರದಿ ಮಂಡಿಸಲು ಸೂಚಿಸಿದೆ ಎಂದು 2022ರ ಫೆ.21ರಂದು ಸಚಿವ ಅಶ್ವತ್ಥ ನಾರಾಯಣ್ ಅವರು ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು.

ಈ ಟಿಪ್ಪಣಿ ಹೊರಡಿಸಿದ ಮೂರೇ ದಿನದಲ್ಲಿ ಅಂದರೆ 2022ರ ಫೆ.24ರಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟನೆ ಹೊರಡಿಸಿದ್ದು, ಅದರಲ್ಲಿ ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದಂತೆ 2021-22ನೇ ಸಾಲಿನಲ್ಲಿ ಹಾಗೂ ಆನಂತರದ ಸಾಲಿನಲ್ಲಿ ನಡೆಯಲಿರುವ ವಿವಿಧ ಪದವಿ ಪರೀಕ್ಷೆಗಳ ಪರೀಕ್ಷಾ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಮರು ಟೆಂಡರ್ ರನ್ನು 2022ರ ಫೆ.11ರಂದು ಆಹ್ವಾನಿಸಲಾಗಿತ್ತು. ಸದರಿ ಟೆಂಡರ್ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆಯ ಸೂಚನೆಯಂತೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಲಾಗಿದೆ. 

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ಚಾಲ್ತಿಯಲ್ಲಿದ್ದ ಪರೀಕ್ಷಾ ನಿರ್ವಹಣೆ ವ್ಯವಸ್ಥೆಯ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಹೀಗಾಗಿ ಹೊಸ ಗುತ್ತಿಗೆಯನ್ನು ನೀಡುವುದು ಅತ್ಯವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ವಿಶ್ವವಿದ್ಯಾನಿಲಯಗಳು ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದವು. ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಲು ಉನ್ನತ ಶಿಕ್ಷಣ ಇಲಾಖೆ ಸಚಿವರು ನೀಡಿರುವ ಸೂಚನೆ ಯಿಂದಾಗಿ ಈ ಎರಡೂ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆ ಚಟುವಟಿಕೆಗಳು ಸ್ಥಗಿತಗೊಂಡಿದೆ. ಅಂದಾಜು ಎರಡೂ ವಿಶ್ವವಿದ್ಯಾನಿಲಯಗಳ ಪ್ರತಿ ಸೆಮಿಸ್ಟರ್‍ಗೆ 2.50 ಲಕ್ಷ ವಿದ್ಯಾರ್ಥಿಗಳಿಗೆ ಅನನುಕೂಲವಾಗಿದೆ. ಈಗಾಗಲೇ ಎರಡನೇ ಮತ್ತು ಮೂರನೇ ವರ್ಷದ ಪರೀಕ್ಷೆಗಳು ನಡೆದಿವೆ. ಸಚಿವರ ಸೂಚನೆ ಮೇರೆಗೆ ಟೆಂಡರ್ ಪ್ರಕ್ರಿಯೆಯೂ ರದ್ದು ಗೊಂಡಿರುವ ಕಾರಣ ಮೌಲ್ಯಮಾಪನ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವೇ ಅತಂತ್ರವಾಗಿದೆ ಎನ್ನುತ್ತಾರೆ ವಿಶ್ವವಿದ್ಯಾನಿಲಯವೊಂದರ ಕುಲಸಚಿವರು.ಸದ್ಯದ ರಾಜ್ಯದ ಒಂದೊಂದೆ ಪರ್ಸೆಂಟೇಜ್ ಕಮಿಷನ್ ಪ್ರಕರಣಗಳು ಮುನ್ನೆಲೆಗೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ಅದೆಷ್ಟು ಪ್ರಕರಣಗಳು ಬೆಳಕಿಗೆ ಬರಲು ಬಾಕಿ ಇವೆವೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!