ಬಹುತ್ವ ಸಮಾಜ ಕಟ್ಟುವ ಅಂಶವಾಗಲಿ- ಪ್ರೊ. ರಹಮತ್ ತರೀಕೆರೆ

ಉಡುಪಿ: ಬಹುತ್ವವನ್ನು ನಾಡುಕಟ್ಟುವ ಪರಿಕಲ್ಪನೆಯಾಗಿ ಪರಿಭಾವಿಸಬೇಕು. ಬಹುತ್ವ ಮತ್ತು ವೈವಿದ್ಯತೆಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಬಹುತ್ವ ಯಾವುದೇ ಒಂದು ಧರ್ಮ-ಸಂಸ್ಕೃತಿಗೆ ಸೀಮಿತವಲ್ಲ. ಧರ್ಮ, ಭಾಷೆ, ಆರ್ಥಿಕತೆ, ಆಚಾರ-ವಿಚಾರಗಳೆಲ್ಲವೂ ಬಹುತ್ವದ ರೂಪವೇ ಆಗಿರುವುದರಿಂದ ಅದನ್ನು ಸಮಾಜ ಕಟ್ಟುವ ಅಂಶವಾಗಿ ಪರಿವರ್ತಿಸಿಕೊಳ್ಳಬೇಕು. ವೈವಿದ್ಯತೆಯಲ್ಲಿ ಸದಾ ಕೊಡುಕೊಳ್ಳುವಿಕೆ, ಅನುಸಂಧಾನ ಇರಬೇಕು ಎಂದು ಪ್ರೊ| ರಹಮತ್ ತರೀಕೆರೆ ಹೇಳಿದ್ದಾರೆ. 

ಶನಿವಾರ ಉಡುಪಿಯಲ್ಲಿ “ಕರಾವಳಿ ಕಟ್ಟು” ಕಾರ್ಯಕ್ರಮದಲ್ಲಿ ತಲ್ಲೂರು ನುಡಿಮಾಲೆ- 2022 ಉಪನ್ಯಾಸ ನೀಡೀ ಮಾತನಾಡಿದ ಅವರು, ಕರಾವಳಿಯ ಆರ್ಥಿಕತೆಯನ್ನು ಎಲ್ಲ ಧರ್ಮಗಳೂ ಸೇರಿ ರೂಪಿಸಿವೆ. ಇಲ್ಲಿ ಬಹುತ್ವಕ್ಕೆ ಸವಾಲೊಡ್ಡೂವ ಹಲವು ಘಟನೆಗಳು ನಡೆಯುತ್ತಿವೆ. ಏಕರೂಪೀಕರಣದ ಒತ್ತಡಗಳು ಬಹುತ್ವವನ್ನು ಮುನ್ನೆಲೆಗೆ ತಂದಿವೆ. ಭಾಷೆ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳು ಸ್ನೇಹ, ಪ್ರೀತಿ, ಸಂಘರ್ಷಗಳನ್ನು ಒಳಗೊಂಡಿರಬೇಕು, ಅದರಿಂದ ಹೊಸ ಚಿಂತನೆ ಹುಟ್ಟು ಪಡೆದು ವಿಸ್ತರಣೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಪ್ರಸಿದ್ಧ ಮರಾಠಿ ಸಿನಿಮಾ ನಿರ್ದೇಶಕ ನಾಗರಾಜ ಮಂಜುಳೆ ಅವರ “ಉನಾಚ್ಯಾ ಕಟಾ ವಿರುದ್ಧ” ಕವನಸಂಕಲನದ ಕನ್ನಡ ಅನುವಾದ “ಬಿಸಿಲಿನ ಷಡ್ಯಂತ್ರದ ವಿರುದ್ಧ” ಕೃತಿಯನ್ನು ರಾಷ್ಟ್ರಪ್ರಶಸ್ತಿ ವಿಜೇತ ಕಿರುಚಿತ್ರ ನಿರ್ದೇಶಕಿ ಫರಾಹ್ ಖಾತೂನ್ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಫರಾಹ್, ನಾಗರಾಜ್ ಅವರ ಕೃತಿಗಳು ಈ ದೇಶದ ನಿರ್ಲಕ್ಷಿತ ಸಮುದಾಯಗಳನ್ನು ಬಿಂಬಿಸುತ್ತವೆ. ಒಂದು ದಿನ ನಾವೆಲ್ಲ ಒಂದಾಗಿ ಬದುಕಲು ಸಾಧ್ಯವಾಗುವ ದಿನಗಳು ಬರಲಿವೆ ಎಂದರು. 

ಕಾರ್ಯಕ್ರಮದಲ್ಲಿ ಮೂಲ ಕವಿ ನಾಗರಾಜ ಮಂಜುಳೆ ಮತ್ತು ಅನುವಾದಕ ಸಂವರ್ತ ಸಾಹಿಲ್ ಅವರ ಸಂವಾದ ನಡೆಯಿತು. ಸಂವಾದದಲ್ಲಿ ತನ್ನ ಬದುಕು, ಬರಹಗಳ ಕುರಿತು ಮಾತನಾಡಿದ ನಾಗರಾಜ ಮಂಜುಳೆ ತನ್ನ ಬಾಲ್ಯ ಹೇಗೆ ತನ್ನ ಕವಿತೆ-ಸಿನಿಮಾಗಳು ರೂಪುಗೊಳ್ಳುವಲ್ಲಿ ಕೆಲಸ ಮಾಡಿತು ಎಂಬುದನ್ನು ಹಂಚಿಕೊಂಡರು. 

ಹಿರಿಯ ಅನುವಾದಕ, ಕವಿ ಡಾ| ಕಮಲಾಕರ ಭಟ್ ಬಿಡುಗಡೆಗೊಂಡ ಕೃತಿಯ ಬಗ್ಗೆ ಮಾತನಾಡಿದರು. ಆರಂಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ರಾಜಾರಾಂ ತಲ್ಲೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕ ಪ್ರಕಾಶಕ ಗೋವಾದ ಸಹಿತ್ ಪ್ರಕಾಶನದ  ಕಿಶೋರ್ ಅರ್ಜುನ್ ಈ ಸಂದರ್ಭದಲ್ಲಿ ಮಾತನಾಡಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಆಡಳಿತ ಟ್ರಸ್ಟಿ ಸುರೇಶ ತಲ್ಲೂರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!