ಒಂದು ವಾಟ್ಸ್ಯಾಪ್ ಸ್ಟೇಟಸ್ ಹಾಕಿದ್ದಕ್ಕೆ ಇಷ್ಟೊಂದು ಕೆರಳಬೇಕೆ?- ಸಿ.ಟಿ.ರವಿ
ವಿಜಯನಗರ: ವಾಟ್ಸ್ಯಾಪ್‌ನಲ್ಲಿ ಒಂದು ಸ್ಟೇಟಸ್ ಹಾಕಿದ್ದಕ್ಕೆ ಇಷ್ಟೊಂದು ಕೆರಳಬೇಕೆ? ಹೀಗೆಂದು ಪ್ರಶ್ನಿಸಿದರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಗರದಲ್ಲಿ ಭಾನುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಅವರು ಮಾತ್ರ ಉಪ್ಪು, ಹುಳಿ, ಖಾರ ತಿಂತಾರಾ? ಸೆಕ್ಯುಲರ್‌ಗಳು ಯಾಕೆ ಈಗ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಚಾರಿತ್ರಿಕ ದೇವಸ್ಥಾನಗಳನ್ನೇ ನಾಶ ಮಾಡಿದ್ದಾರೆ. ಅದರ ಮೇಲೂ ಕೂಡ ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ. ಸಣ್ಣ ಘಟನೆ ಇಟ್ಟುಕೊಂಡು ಗಲಾಟೆ ಮಾಡೋಕೊ ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ರು. 150ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟಿದ್ದರು. ಅನೇಕ ಮಳಿಗೆ ಸುಟ್ಟಿದ್ದವು. ಅದು ಕೂಡ ಒಂದು ಸ್ಟೇಟಸ್ ಕಾರಣದಿಂದ. ಅವರ ಮಾನಸಿಕತೆ ಯಾವ ರೀತಿ ಇತ್ತು. ಇದು ಈ ನೆಲದ ಕಾನೂನಿಗೆ ಬೆಲೆ ಕೊಡೋ ಮಾನಸಿಕತೆನಾ? ಎಂದು ಕೇಳಿದರು.
ಸ್ಟೇಟಸ್ ಹಾಕಿದವನು ಹಿಂದೂ, ಮುಸ್ಲಿಂ ಯಾರೇ ಇರಲಿ, ಗಲಭೆಗೆ ಪ್ರಚೋದಿಸಲು ಹಾಕಿರಬಹುದು. ಆದರೆ, ಗಲಾಟೆ ಮಾಡೋದಾ? ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಬಹುದು. ಕಾನೂನು ಕ್ರಮಕ್ಕೆ ಆಗ್ರಹಿಸಬೇಕು. ಕಾನೂನು ಕೈಗೆತ್ತಿಕೊಳ್ಳಬೇಕು ಎಂದು ಯಾರು ಹೇಳಿದರು ಎಂದು ಪ್ರಶ್ನಿಸಿದರು.