ಹುಬ್ಬಳ್ಳಿ: ಕಲ್ಲಿನ ರಾಶಿ ಎಲ್ಲಿಂದ ಬಂತು? ಹೇಗೆ ಬಂತು ಎನ್ನುವುದೇ ಪ್ರಶ್ನೆ- ಆರಗ ಜ್ಞಾನೇಂದ್ರ

ಹೊಸಪೇಟೆ: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಅದರಲ್ಲೂ ಕಲ್ಲಿನ ರಾಶಿ ಎಲ್ಲಿಂದ ಬಂತು? ಹೇಗೆ ಬಂತು? ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೋಳ್ಳುವುದಕ್ಕು ಮುನ್ನ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

‘ಈ ರೀತಿ ಯಾರೇ ಮಾಡಿರಲಿ, ಯಾವುದಕ್ಕೇ ಮಾಡಿರಲಿ ಎಲ್ಲದಕ್ಕೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಮತ, ಧರ್ಮದವರೇ ಆಗಿದ್ದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪ್ರತಿಭಟನೆ ಮಾಡುವ ಹಕ್ಕು ಸಾರ್ವಜನಿಕರಿಗೆ ಇದೆ. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿ, ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆದರೆ, ಒಂದೂವರೆ ಗಂಟೆಯಲ್ಲಿ ಪೊಲೀಸರು ತಹಬದಿಗೆ ತಂದಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದರು.

‘ಯುವಕ ವಾಟ್ಸಾಪ್ ಸ್ಟೇಟಸ್‌ ಹಾಕಿದ್ದರ ಬಗ್ಗೆ ಕಂಪ್ಲೇಂಟ್‌ ಮಾಡಿದ್ದಾರೆ. ಪೊಲೀಸರು ಕಾನೂನಿನ ಪ್ರಕಾರ ಕ್ರಮವೂ ಕೈಗೊಂಡಿದ್ದಾರೆ. ಆದರೆ, ಸಾವಿರಕ್ಕೂ ಹೆಚ್ಚು ಜನ ಇದ್ದ ಗುಂಪು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಹಿಂಸಾಚಾರಕ್ಕಿಳಿದಿದೆ. ಪೊಲೀಸ್‌ ವಾಹನ ಜಖಂಗೊಂಡಿವೆ. ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇನ್‌ಸ್ಪೆಕ್ಟರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!