ಈಗ ರಾಜಕಾರಣ ಎಂದರೆ ಹಣ ಮಾಡುವುದು ಆಗಿರುವುದು ದುರಂತ- ವೀರಪ್ಪ ಮೊಯಿಲಿ
ಹೆಬ್ರಿ: ಈಗ ರಾಜಕಾರಣ ಸೇವೆಯಾಗಿ ಉಳಿದಿಲ್ಲ. ರಾಜಕಾರಣ ಎಂದರೆ ಶಾಸಕರಾಗುವುದು ಹಣ ಮಾಡುವುದೇ ಉದ್ದೇಶ ಆಗಿದೆ. ನಮ್ಮ ಕಾಲದಲ್ಲಿ ಜನಸೇವೆಯನ್ನೇ ರಾಜಕಾರಣ ಎಂದು ಭಾವಿಸಿ ಕೆಲಸ ಮಾಡಿದ್ದರಿಂದ ಎತ್ತರಕ್ಕೆ ಏರಲು ಸಾಧ್ಯವಾಗಿದೆ. ರಾಜಕಾರಣದಲ್ಲಿ ಜನಸೇವೆಯಲ್ಲಿ ಇರಬೇಕೇ ಹೊರತು ಜನಸೇವೆಯಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು. ಮುದ್ರಾಡಿ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಮೂಲಕ ಕೊರೊನ ಸಂಕಷ್ಟ ಸೇರಿ ನಿರಂತರವಾಗಿ ಮಂಜುನಾಥ ಪೂಜಾರಿ ಅವರು ಜನರ ಸೇವೆ ಮಾಡುತ್ತಿರುವುದು ನಮಗೆಲ್ಲ ಅತ್ಯಂತ ಹೆಮ್ಮೆ. ಕಣ್ಣು ನಮಗೆ ಮುಖ್ಯ ಜನರ ಆರೋಗ್ಯದ ಸೇವೆ ಮಾಡುವ ಮೂಲಕ ನಾಡಿಗೆ ಬೆಳಕು ನೀಡುವ ಕಾರ್ಯ ನಡೆಯುತ್ತಿರುವುದು ಅತ್ಯಂತ ಒಳ್ಳೇಯ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಜನನಾಯಕ ಡಾ.ಎಂ. ವೀರಪ್ಪ ಮೊಯಿಲಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಭಾನುವಾರ ಮುದ್ರಾಡಿ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ನೇತ್ರತ್ವದಲ್ಲಿ ಮುದ್ರಾಡಿ ಮಂಜುನಾಥ ಪೂಜಾರಿ ಮಾರ್ಗದರ್ಶನದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಭಾಗಿತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ನಡೆದ ಬೃಹತ್ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಂದು ತಾನು ಆರಂಭಿಸಿ ಸಿಇಟಿ ಸಾಮಾನ್ಯ ಪರೀಕ್ಷೆಯಿಂದ ಇಂದು ಸಾಕಷ್ಟು ಜನ ಉನ್ನತ ಸ್ಥಾನ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಸರ್ಕಾರ ಆರಂಭಿಸಿದ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಿಂದಾಗಿ ವಿದ್ಯಾರ್ತಿಗಳ ಬದುಕು ಅತಂತ್ರದ ಜೊತೆಗೆ ದುರಂತವೂ ಆಗುತ್ತಿದೆ. ಮಕ್ಕಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶ್ರಮ ಸಾಧನೆ ಅಂಕಗಳು ಗಣನೆಗೆ ಬರುತ್ತಿಲ್ಲ. ಇದು ಸರಿಯಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ, ಕೊರೋನಾದಿಂದಲೂ ವಿದ್ಯಾರ್ಥಿಗಳ ಶಿಕ್ಷಣ ಜೀವನಕ್ಕೆ ಸಮಸ್ಯೆಯಾಗಿದ್ದು ಸರ್ಕಾರ ಹೊಸ ನೀತಿಯ ಮೂಲಕ ಮಕ್ಕಳ ಬದುಕು ಕಟ್ಟಬೇಕಾಗಿದೆ ಎಂದು ವೀರಪ್ಪ ಮೊಯಿಲಿ ಸರ್ಕಾರಕ್ಕೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುದ್ರಾಡಿ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇರುವ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಮಾಜಮುಖಿ ಸೇವೆ ಮಾಡುವುದು ನನ್ನ ಉದ್ದೇಶ, ಎಲ್ಲರ ಸಹಾಯ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ದಿಶಾ, ವೀರಪ್ಪ ಮೊಯಿಲಿ ಸಹಿತ ಹಲವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 175 ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಮುದ್ರಾಡಿ ಗ್ರಾಮ ಪಂಚಾಯತ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘ, ಮುದ್ರಾಡಿ ಶ್ರೀಗುರುರಕ್ಷಾ ಸೌಹಾರ್ದ ಸಹಕಾರಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮತ್ತು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶಿಬಿರ ನಡೆಯಿತು.
ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೋಹನದಾಸ್, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಗುರುರಕ್ಷಾ ಸೌಹಾರ್ದ ಸಹಕಾರಿಯ ಗೌರವ ಸಲಹೆಗಾರ ನಾರಾಯಣ ಪೂಜಾರಿ, ವಿವಿಧ ಮುಖಂಡರಾದ ವಕೀಲ ಶೇಖರ ಮಡಿವಾಳ್, ಅಶೋಕ ಕುಮಾರ್ ಕೊಡವೂರು, ನೀರೆ ಕೃಷ್ಣ ಶೆಟ್ಟಿ, ವಿವಿಧ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು.