ವಾಟ್ಸ್ ಆ್ಯಪ್ ಸ್ಟೇಟಸ್ ವಿಚಾರ ಹುಬ್ಬಳ್ಳಿ ಉದ್ವಿಗ್ನ: ಇನ್ಸ್‌ಪೆಕ್ಟರ್ ಸಹಿತ 12 ಮಂದಿಗೆ ಗಾಯ-ನಿಷೇದಾಜ್ಞೆ ಜಾರಿ

ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದಲ್ಲಿ ಶನಿವಾರ ನಡೆದ ಕಲ್ಲು ತೂರಾಟ ಹಾಗೂ ದಾಂದಲೆ ನಡೆಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇದುವರೆಗೆ ಆರು ಪ್ರಕರಣಗಳನ್ನು ದಾಖಲಿಸಿ 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಯುವಕನೊಬ್ಬ ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ಚಿತ್ರವನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಆಗಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ, ಇಂಡಿ ಪಂಪ್ ವೃತ್ತದಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಕೆಲವರು ನಂತರ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಘಟನೆ ಕಾರಣನಾದ ಯುವಕ ಅಭಿಷೇಕ ಹಿರೇಮಠನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಘಟನೆಯಲ್ಲಿ ಸಂಚಾರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಡದೇವರ ಮಠ, ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ, ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ಸುದ್ದಿಗಾರರಿಗೆ ತಿಳಿಸಿದರು.

ದಾಂದಲೆಯಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಒಟ್ಟು 12 ವಾಹನಗಳು ಜಖಂಗೊಂಡಿವೆ. ಘಟನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಹಾನಿಯಾಗಿದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ ಏ.‌ 20 ರವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಚನ್ನಮ್ಮ ವೃತ್ತ, ಘಟನೆ ನಡೆದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!