ಉಡುಪಿ: ಚಿಕಿತ್ಸೆಗೆ ಬರುವ ರೋಗಿಗೆ ಯಶೋಧಾ ಆಟೋ ಚಾಲಕರಿಂದ ಉಚಿತ ಸೇವೆ
ಉಡುಪಿ ಎ.16 (ಉಡುಪಿ ಟೈಮ್ಸ್ ವರದಿ): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕೊಕ್ಕರ್ಣೆಯ ಗೀತಾ ಸೂರಾಲ್ ಅವರಿಗೆ ಡಯಾಲಿಸೀಸ್ ಗೆ ನೆರವಾಗುವ ಸಲುವಾಗಿ ಯಶೋಧಾ ಆಟೋ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಕೈಗೊಂಡಿರುವ ಉಚಿತ ಆಟೋ ಸೇವೆಯ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಯಶೋಧಾ ಆಟೋ ಯೂನಿಯನ್ ನ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅವರು ಈ ಉಚಿತ ಆಟೋ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕೊಕ್ಕರ್ಣೆಯ ಗೀತಾ ಸೂರಲ್ ಅವರಿಗೆ ವಾರದಲ್ಲಿ ಎರಡು ದಿನ ಬುದವಾರ ಮತ್ತು ಶನಿವಾರ ಡಯಾಲಿಸಿಸ್ ಗಾಗಿ ಕೊಕ್ಕರ್ಣೆಯಿಂದ ಬರಬೇಕಿತ್ತು. ಕೊಕ್ಕರ್ಣೆಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಹೋಗಿ ಬರಲು 65 ಕಿ.ಮಿ ದೂರ ಇದ್ದು. ಇದಕ್ಕಾಗಿ ಹಣದ ಸಮಸ್ಯೆ ಇದ್ದ ಅವರು, ರಿಕ್ಷಾಗೆ ಬಾಡಿಗೆ ನೀಡಲು ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಹೋಂ ಡಾಕ್ಟರ್ ಫೌಂಡೇಶನ್ ಶಶಿ ಕಿರಣ್ ಶೆಟ್ಟಿ ಅವರು ಗೀತಾ ಸೂರಲ್ ಅವರಿಗೆ ಉಚಿತ ರಿಕ್ಷಾ ಸೇವೆ ನೀಡ ಬಹುದೇ ಎಂದು ಕೇಳಿಕೊಂಡಿದ್ದರು. ಅದರಂತೆ ನಮ್ಮ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಉಡುಪಿ ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಚಿಕಿತ್ಸೆಗೆ ಬರುವ ಗೀತಾ ಸೂರಲ್ ಅವರಿಗೆ ಒಂದು ವರ್ಷಗಳ ಕಾಲ ಇಲ್ಲಿಂದ ಮನೆಗೆ ಕರೆದುಕೊಂಡು ಹೋಗಲು ಉಚಿತ ಆಟೋ ಸೇವೆ ನೀಡಲು ನಿರ್ದರಿಸಿದ್ದೇವೆ. ಈಗಾಗಲೇ ಮೂರು ವಾರಗಳಂತೆ 6 ಬಾರಿ ಈ ಉಚಿತ ಸೇವೆ ನೀಡಿದ್ದೇವೆ. ಈ ಹಿಂದೆಯೂ ರಾಜ್ಯದಲ್ಲೇ ಪ್ರಥಮ ಎಂಬಂತೆ ಕೋವಿಡ್ ಸಮಯದಲ್ಲಿ 64 ದಿನ 37 ರೀಕ್ಷಾದಲ್ಲಿ ಉಚಿತವಾಗಿ ಸೇವೆ ನೀಡಿದ್ದೆವು ಎಂದು ತಿಳಿಸಿದರು.
ಈ ಸಂದರ್ಭ ಯಶೋಧಾ ಆಟೋ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ಸುಧಾಕರ ಪರ್ಕಳ, ಚರಣ್ ರಾಜ್, ಕೃಷ್ಣರಾಜ್, ಹರೀಶ್ ಕಾಂಚನ್, ಸಂತೋಷ್ ಶೆರಿಗಾರ್, ಶಕಿಲ್, ರಕ್ಷತ್, ಗಣೇಶ್ ಉಪಸ್ಥಿತರಿದ್ದರು.