ಕಂಡವರ ಭೂಮಿಗೆ ಬೇಲಿಸುತ್ತುವ, ಗ್ರಾನೈಟ್ ಕಳ್ಳನಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ- ಬಿಜೆಪಿ
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್– ಬಿಜೆಪಿ ಮಧ್ಯೆ ರಾಜಕೀಯದ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಭ್ರಷ್ಟಾಧ್ಯಕ್ಷ ಹ್ಯಾಷ್‌ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪರಮ ಭ್ರಷ್ಟ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ ಎಂದು ದೊರೆಸ್ವಾಮಿ ನೇತೃತ್ವದಲ್ಲಿ ಸಾಹಿತಿಗಳು ಹೈಕಮಾಂಡ್‌ಗೆ ಪತ್ರ ಬರೆದಾಗ ಸಿದ್ದರಾಮಯ್ಯ ಸೊಬಗನಂತೆ ವರ್ತಿಸಿದ್ದರು. ಅದೇ ಸಿದ್ದರಾಮಯ್ಯ, ಇಂದು ಭ್ರಷ್ಟನ ಪಕ್ಕದಲ್ಲಿ ಕುಳಿತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ರಿಪಬ್ಲಿಕ್ ಆಫ್ ಕನಕಪುರದಲ್ಲಿ ಡಿಕೆ ಬ್ರದರ್ಸ್ ಪ್ರಾಕೃತಿಕ ಸಂಪನ್ಮೂಲಗಳನ್ನು ಅಕ್ರಮವಾಗಿ ದೋಚಿ ವಿದೇಶಕ್ಕೆ ರವಾನೆ ಮಾಡಿದ್ದಾರೆ. ಇಂತಹ ನಾಡದ್ರೋಹಿಗಳ ವಿರುದ್ಧ ತನಿಖೆಯಾಗಬೇಕಿದೆ. ಡಿಕೆ ಸಹೋದರರಿಬ್ಬರೂ ಕೆಪಿಸಿಸಿ ಸೆಲ್ ಬದಲು ಜೈಲು ಸೆಲ್‌ನಲ್ಲಿರಲಷ್ಟೇ ಅರ್ಹರು ಎಂದಿದೆ.
ಕಂಡವರ ಭೂಮಿಗೆ ಬೇಲಿಸುತ್ತುವ ಹಾಗೂ ಗ್ರಾನೈಟ್ ಕಳ್ಳರೊಬ್ಬರು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಈ ಭ್ರಷ್ಟಾಚಾರ ವಿರೋಧಿಯ ಹಸ್ತಕ್ಕೆ ಅಂಟಿದ ಅಕ್ರಮದ ಕಲೆಗಳ ಲೆಕ್ಕ ಊಹಿಸಲು ಸಾಧ್ಯವೇ? ಇಂʼಧನ, ಧನʼಸಂಪನ್ಮೂಲ ಇಲಾಖೆ, ಹೀಗೆ ಹೋದಲ್ಲೆಲ್ಲ ʼಲಕ್ಷ್ಮಿʼ ಯನ್ನೇ ಒಲಿಸಿಕೊಂಡಿದ್ದು! ಎಂದು ಆರೋಪಿಸಿದೆ.