ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೇ ಸಾಲದು, ಕೂಡಲೇ ಬಂಧಿಸಬೇಕು- ಹಿಂದೂ ಮಹಾಸಭಾ ಒತ್ತಾಯ

ಮಂಗಳೂರು, ಎ.16: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಿದರಷ್ಟೇ ಸಾಲದು. ಕೂಡಲೇ ಅವರನ್ನುಬಂಧಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಈ ಬಗ್ಗೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು, ರಾಜ್ಯದಲ್ಲಿ ನಾನಾ ರೀತಿಯಲ್ಲಿ ಹಿಂದೂ ಕಾರ್ಯಕರ್ತರ ಬಲಿ ಆಗುತ್ತಿದೆ, ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದವರಿಗೆ ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಅಧಿಕಾರ ಪಡೆಯುವುದು ಮಾತ್ರ ಗೊತ್ತಿದೆ ಹೊರತು ಹಿಂದೂಗಳಿಗಾಗಿ ಏನೂ ಮಾಡಿಲ್ಲ ಎಂದು ಆರೋಪಿಸಿದರು.

ಲಂಚ, ಮಂಚ ಮತ್ತು ಹಿಂದೂ ವಿರೋಧಿ ನೀತಿಗಳು ಮಾತ್ರ ಬಿಜೆಪಿ ಅಜೆಂಡಾ ಆಗಿದೆ ಎಂದ ಅವರು, ಯಾವ ಉದ್ದೇಶಕ್ಕಾಗಿ ಅಧಿಕಾರಕ್ಕಾಗಿ ಬಂದಿದ್ದಾರೋ ಅದು ಸಾಕಾರ ಆಗುತ್ತಿಲ್ಲ. ಈಶ್ವರಪ್ಪರ ರಾಜೀನಾಮೆ ಒತ್ತಾಯದ ಮೇಲೆ ಆಗಿದ್ದು, ಇದು ಚುನಾವಣೆ ಹಿನ್ನೆಲೆಯಲ್ಲಿ ಬೂಟಾಟಿಕೆಯ ಕುತಂತ್ರ ಮಾತ್ರ ಎಂದು ಟೀಕಿಸಿದರು. ಹಿಜಾಬ್ ಪ್ರಕರಣದಲ್ಲಿ ಆರು ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಆಗದವರು ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ಮಾಡುತ್ತಾರೆಂಬ ನಂಬಿಕೆ ಇಲ್ಲ.

ಬಿಜೆಪಿ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗಾ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮನೆಯವರು ಇನ್ನೂ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಕೊಲೆ ಅನ್ನಬೇಕೋ ಆತ್ಮಹತ್ಯೆ ಅನ್ನಬೇಕೋ ಗೊತ್ತಾಗುತ್ತಿಲ್ಲ. ಈ ಬಗ್ಗೆ ಉನ್ನತ  ಮಟ್ಟದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು. ಮುಖಂಡರಾದ ಧರ್ಮೇಂದ್ರ ಮಾತನಾಡಿ, ಕಾಂಗ್ರೆಸ್ 60 ವರ್ಷದಲ್ಲಿ ಲೂಟಿ ಮಾಡಿದೆ ಎಂದು ಅಧಿಕಾರಕ್ಕೆ ಬಂದವರು 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದರೆ ಏನರ್ಥ. ಈಶ್ವರಪ್ಪನವರು ಎಲ್ಲಾ ಕಾಮಗಾರಿಗಳನ್ನು ವರ್ಕ್ ಆರ್ಡರ್ ಪಡೆದೇ ನೀಡಿದ್ದಾರೆಂಬ ಬಗ್ಗೆ ಬಹಿರಂಗವಾಗಿ ಹೇಳಲಿ. ಅಧಿಕಾರಿಗಳು, ಇಂಜಿನಿಯರ್ ಗಳು, ಜೂನಿಯರ್ ಇಂಜಿನಿಯರ್ ಗಳು ಹೇಳಲಿ. ಸರಕಾರದ ವಿಸರ್ಜನೆ ಮಾಡಿ ರಾಜ್ಯಪಾಲರ ಮೂಲಕ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಹಾಗೂ ಪ್ರಧಾನಿ ಮೋದಿ ಅವರ ಭ್ರಷ್ಟಾಚಾರ ವಿರುದ್ಧದ ಹೇಳಿಕೆ ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಮಾತ್ರವಲ್ಲದೆ ಈಶ್ವರಪ್ಪ ತಾನು ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!