40% ಕಮೀಷನ್ ಆಪಾದನೆ ಪ್ರಧಾನಿ ಗಮನಕ್ಕೆ ತಂದರೂ ಪ್ರತಿಕ್ರಿಯಿಸಿಲ್ಲ- ಮಾಜಿ ಡಿಸಿಎಂ ಪರಮೇಶ್ವರ್

ಉಡುಪಿ ಎ.16 (ಉಡುಪಿ ಟೈಮ್ಸ್ ವರದಿ): ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿರುವುದರಿಂದ ಅವರ ವಿರುದ್ಧ ಕಾನೂನಿನ ಪ್ರಕಾರ ಕೈಗೊಳ್ಳಬೇಕು ಹಾಗೂ ಇಂತಹ ಬ್ರಷ್ಟಚಾರ ಮುಂದೆ ಆಗದಂತೆ ತಡೆಯಲು ಹೈಕೋಟ್‍ನ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆ ಆಗಬೇಕು ಎಂದು ಮಾಜಿ ಡಿಸಿಎಂ ಪರಮೇಶ್ವರ್ ಆಗ್ರಹಿಸಿದ್ದಾರೆ. 

ಇಂದು ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಡೆತ್ ನೋಟ್ ನಲ್ಲಿ ಈಶ್ವರಪ್ಪನವರೇ ತನ್ನ ಸಾವಿಗೆ ಕಾರಣ. ಅವರ ವಿರುದ್ಧ ಕ್ರಮ ಆಗಬೇಕು ಎಂದು ಬರೆದಿರುವ ಹಿನ್ನೆಲೆಯಲ್ಲಿ ವಿಚಾರವಾಗಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ ಆದರೆ ಸರಕಾರ ಯಾವುದೇ ರೀತಿ ಸ್ಪಂದಿಸಿರಲಿಲ್ಲ. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ನೀಡಿದ್ದೇವೆ. ರಾಜ್ಯದಲ್ಲಿ 40 ಪರ್ಸೆಂಟ್ ಕಮೀಷನ್ ತೆಗೆದುಕೊಳ್ಳುತ್ತಾರೆ ಎಂಬ ಬಹಳ ದೊಡ್ಡ ಆಪಾದನೆಯನ್ನು ಅಧಿಕೃತವಾಗಿರುವ ರಿಜಿಸ್ಟರ್ಡ್ ಸಂಸ್ಥೆಯ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಗಮನಕ್ಕೆ ತಂದರೂ ಪ್ರತಿಕ್ರಿಯೆಯೂ ಬಂದಿಲ್ಲ, ತನಿಖೆಯೂ ಆಗಿಲ್ಲ ಎಂದು ಆರೋಪಿಸಿದರು. ಹಾಗೂ ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸರಿಯಾದ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ ಪ್ರಕರಣದ ತನಿಖೆ ಆಗಿ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ರಾಜ್ಯದಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು. 

ಸಂತೋಷ್ ಪಾಟೀಲ್ ಅವರದ್ದು, ಆತ್ಮಹತ್ಯೆಯೋ ಬೇರೆ ಕಾರಣಗಳಿವೆಯಾ ಎಂಬ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು ಎಂದ ಅವರು, ಡೆತ್ ನೋಟ್ ಸ್ಪಷ್ಟವಾಗಿ ಇರುವುದರಿಂದ ಆತ್ಮಹತ್ಯೆ ಅಂತನೇ ಹೇಳಬಹುದು. ತನಿಖೆ ಆದರೆ ಎಲ್ಲಾ ಸ್ಪಷ್ಟವಾಗುತ್ತೆ ಎಂದರು. ಹಾಗೂ 10-15 ಆರೋಪಿಗಳಿದ್ದರೆ ಪೊಲೀಸ್ ಸ್ಟೇಷನ್ ಗೆ ಕರೆಸಿ ವಿಚಾರಣೆ ಮಾಡಿ ಬಿಡಬಹುದಿತ್ತು. ಒಬ್ಬ ಆರೋಪಿಯನ್ನು ಬಂಧನ ಮಾಡಬೇಕಲ್ವಾ ಎಂದರು.

ಜಾರ್ಜ್ ಬಂಧನವಾಗಿತ್ತಾ? ಎಂಬ ಬಿಜೆಪಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜಾರ್ಜ್ ಕೇಸೇ ಬೇರೆ ಈ ಪ್ರಕರಣವೇ ಬೇರೆ. ಎರಡು ಪ್ರಕರಣಗಳನ್ನು ಹೋಲಿಸಬಾರದು. ಬಿಜೆಪಿಯವರು ಯಾವತ್ತೂ ಹೀಗೆನೇ ಮಾಡುತ್ತಾರೆ. ನೀನು ತಪ್ಪು ಮಾಡಿದ್ದಿ ಅಂದರೆ ನೀವು ಮಾಡಿಲ್ಲವಾ ಎಂದು ಕೇಳುತ್ತಾರೆ ಈ ರೀತಿ ಸಮರ್ಥನೆ ಮಾಡುವುದು ಕೆಟ್ಟ ಬೆಳವಣಿಗೆ. ಆ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ಕೊಟ್ಟಿದ್ದಾರೆ. ಸಿಬಿಐ ತನಿಖೆ ಆಯ್ತು ಏನಿಲ್ಲ ಎಂಬುದು ಗೊತ್ತಾಯ್ತು ಎಂದರು.

Leave a Reply

Your email address will not be published. Required fields are marked *

error: Content is protected !!