ಸಂತೋಷ್ ಪಾಟೀಲರದ್ದು ಆತ್ಮಹತ್ಯೆಯೋ, ಕೊಲೆಯೋ ಅನುಮಾನ ಇದೆ ಎಂದ ಮಾಜಿ ಸಚಿವ ಈಶ್ವರಪ್ಪ
ಶಿವಮೊಗ್ಗ: ಇದೊಂದು ಷಡ್ಯಂತ್ರ.. ಈ ಪ್ರಕರಣದಲ್ಲಿ ಏನೇನು ಇಲ್ಲ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಬಗ್ಗೆಯೂ ಸಿಂಪತಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಷಡ್ಯಂತ್ರ. ಈ ಪ್ರಕರಣದಲ್ಲಿ ಏನೇನು ಇಲ್ಲ. ಇಡಿ ರಾಜ್ಯದಿಂದ ಎಲ್ಲರೂ ನನಗೆ ಬೆಂಬಲ ಕೊಡ್ತಿದ್ದಾರೆ. ನನ್ನ ಬಗ್ಗೆ ಯಾವುದೇ ಒಡಕು ಧ್ವನಿ ಇಲ್ಲ. ಎಲ್ಲರದ್ದು ಒಂದೇ ಧ್ವನಿ ಇದರಲ್ಲಿ ನಿಮ್ಮ ಯಾವುದೇ ತಪ್ಪು ಇಲ್ಲ. ಷಡ್ಯಂತ್ರ ಇದೆ. ಈ ಷಡ್ಯಂತ್ರದಿಂದ ನೀವು ಹೊರಗೆ ಬರುತ್ತೀರಾ ಎಂಬ ಮಾತನ್ನು ಹೇಳ್ತಿದ್ದಾರೆ. ನಾನು ಅವರಿಗೆ ನ್ಯಾಯಾಲಯದ ಮೂಲಕ ನೋಟೀಸ್ ಕೊಟ್ಟಾಗ ಹೆದರಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆ ಅಂದುಕೊಂಡಿದ್ದೆ. ಆದರೆ ಆಮೇಲೆ ನನಗೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ. ಕೊಲೆ ಎನ್ನುವ ಅಂಶಗಳ ಬಗ್ಗೆ ಬೇರೆ ಬೇರೆಯವರ ಜೊತೆ ಮಾತನಾಡಿದಾಗ ಅನೇಕ ಅಂಶ ಮಾತನಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತನಿಖೆ ವರದಿ ಬರಬೇಕು ಅಂತಾ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆ ಮೃತ ಹುಡುಗನ ಬಗ್ಗೆ ನನಗೂ ಸಹ ಒಂದು ರೀತಿಯ ಸಿಂಪತಿ ಇದೆ. ಆ ಹುಡುಗನನ್ನು ಯಾರಾದ್ರೂ ದುರುಪಯೋಗ ಮಾಡಿಕೊಂಡ್ರಾ? ಇದು ತನಿಖೆ ಆದ ನಂತರವೇ ಹೊರ ಬರಲಿದೆ ಎಂದರು.
ವೀರಶೈವ ಸಮಾಜದವರ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವೀರಶೈವ ಸಮಾಜದ ಯಾರೋ 4 ಜನ ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ನಾನು ಒಪ್ಪಲ್ಲ. ಈ ಬಗ್ಗೆ ನ್ಯಾಯ ಹೊರಗೆ ಬರಬೇಕು. ಯಾರೂ ತಪ್ಪು ಮಾಡಿದ್ದಾರೋ ಅವರ ಹೆಸರು ಹೊರಗೆ ಬರಬೇಕು ಎಂದರು.
ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಹೇಳಿದ ಮಾಜಿ ಸಚಿವ ಈಶ್ವರಪ್ಪ, ಈ ಷಡ್ಯಂತ್ರದ ರೂವಾರಿಗಳು ಯಾರು? ವ್ಯಕ್ತಿನೋ, ಸಂಸ್ಥೆನೋ, ಪಕ್ಷನೋ ಎಂಬುದು ಹೊರಗೆ ಬರಬೇಕು. ಆಗ ನಿಜಕ್ಕೂ ಆತನ ಆತ್ಮಕ್ಕೂ ಶಾಂತಿ ಸಿಗುತ್ತದೆ. ಸಮಾಜದವರು, ಕುಟುಂಬದವರು ಏನು ಮಾಡಬೇಕೋ ಮಾಡಲಿ ಅದು ಅವರ ಕರ್ತವ್ಯ. ಇದು ಆತ್ಮಹತ್ಯೆಯೋ, ಕೊಲೆಯೋ ಏನು ಎಂಬುದು ಗೊತ್ತಿಲ್ಲ. ಏನು ಗೊತ್ತಿಲ್ಲದೇ ಸರಕಾರ ಸಹ ಏನು ಮಾಡಲು ಸಾಧ್ಯವಿಲ್ಲ. ತನಿಖೆಯ ವರದಿ ಬಂದ ನಂತರ ಸಿಎಂ ಜೊತೆ ಮಾತನಾಡುತ್ತೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಇದರ ಹಿಂದೆ ಡಿಕೆಶಿ ಇದ್ದಾರೋ, ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲ್ಲ. ತನಿಖೆಯ ವರದಿ ಬಂದ ನಂತರ ಡಿಕೆಶಿಯೇ ಇದರ ಹಿಂದೆ ಇದ್ದಾರೆ ಎಂದು ಗೊತ್ತಾದರೆ ಆಗ ಹೇಳ್ತೇನೆ ಎಂದು ಎಚ್ಚರಿಕೆ ನೀಡಿದ ಈಶ್ವರಪ್ಪ, ತನಿಖೆಯ ವರದಿ ತಿಳಿದುಕೊಳ್ಳದೇ ಏನು ಹೇಳಲು ಇಷ್ಟಪಡಲ್ಲ ಎಂದರು.
ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಮನಃಸಾಕ್ಷಿ ಇದ್ದರೆ, ಸಿದ್ದರಾಮಯ್ಯ, ಡಿಕೆಶಿ ಅವರನ್ನು ಸ್ಪಷ್ಟವಾಗಿ ಕೇಳುತ್ತೇನೆ. ಜಾರ್ಜ್ ಅವರ ತನಿಖೆ ಆಗುವ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟರು. ಅವರನ್ನು ಬಂಧನ ಮಾಡಿದ್ರಾ? ಯಾಕೆ ಬಂಧನ ಮಾಡಲಿಲ್ಲ? ನನ್ನದು ಏನಾದ್ರೂ ಒಂದು ಪರ್ಸೆಂಟ್ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ. ಇಲ್ಲ ನಿರ್ದೋಷಿಯಾಗಿ ಹೊರಗೆ ಬರಲಿ ಅಂತಾ ನಾನು ಹೇಳಿದ್ದೇನೆ. ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಮನಃಸಾಕ್ಷಿ ಇದ್ದರೇ ಅವರೂ ತಮ್ಮ ಮನೆದೇವರು ನಂಬುವ ಹಾಗೆ ಇದ್ದರೆ ಅದರ ಪ್ರಕಾರ ಹೇಳಲಿ. ಜಾರ್ಜ್ ಬಂಧಿಸದೇ ಏಕೆ ನನ್ನ ಬಂಧನ ಕೇಳುತ್ತಿದ್ದಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ನಾನು ಬಿಜೆಪಿ ಸದಸ್ಯ ಆದ ದಿನದಿಂದಲೂ ಪಕ್ಷದ ತೀರ್ಮಾನವೇ ಅಂತಿಮ. ಶಾಸಕ ಆಗಲಿ, ಮಂತ್ರಿ ಆಗಲಿ, ಉಪ ಮುಖ್ಯಮಂತ್ರಿ ಆಗಲಿ, ಈಗ ರಾಜೀನಾಮೆ ಕೊಡುವ ಸಂದರ್ಭದಲ್ಲಿ ಎಲ್ಲಾ ಸಂದರ್ಭದಲ್ಲೂ ಪಕ್ಷದ ಜೊತೆಗೆ ತೀರ್ಮಾನ ಮಾಡಿ ಪಕ್ಷ ಏನು ತೀರ್ಮಾನ ಮಾಡುತ್ತದೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಈಗ ಪಕ್ಷ ಏನು ಚಟುವಟಿಕೆ ಮಾಡಬೇಕು ಅನ್ನುತ್ತದೋ ಅದನ್ನು ಮಾಡ್ತೇನೆ. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ನಾಶ ಮಾಡಬೇಕು ಅಂತಾ ಹೊರಟ್ರು. ಅವರ ಅಜ್ಜಿ ಕೈಯಲ್ಲಿ ಆಗದಿದ್ದು, ಅವರ ಮೊಮ್ಮಗ ಮಾಡ್ತಾನಾ? ಇವತ್ತು ರಾಜ್ಯದಲ್ಲಿ ನನ್ನ ಮೇಲಿನ ಸ್ನೇಹ, ಪ್ರೀತಿ ಜಾಸ್ತಿ ಆಗಿದೆ. ಕಳೆದ ಮೂರು ದಿನಗಳಿಂದ ಸಾವಿರಾರು, ಲಕ್ಷಾಂತರ ಮಂದಿ ಪೋನ್ ಮಾಡ್ತಿದ್ದಾರೆ. ಇವತ್ತು ಹತ್ತಾರು ಸ್ವಾಮೀಜಿಗಳು ಬಂದಿದ್ದಾರೆ. ನಮ್ಮ ಮನೆಗೆ ಇಷ್ಟೊಂದು ಜನ ಸ್ವಾಮೀಜಿಗಳು ಯಾವಾಗ ಬಂದಿದ್ದರು? ಸ್ವಾಮೀಜಿಗಳು ಏಕೆ ಬರುತ್ತಿದ್ದಾರೆ? ನಾನು ತಪ್ಪು ಮಾಡಿಲ್ಲ, ನಿರ್ದೋಷಿಯಾಗಿ ಹೊರಗೆ ಬರಬೇಕು ಎಂಬ ಕಾರಣಕ್ಕೆ ಎಂದು ತಿಳಿಸಿದರು.
ನಿನ್ನೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವಾಗ ದಾರಿಯುದ್ದಕ್ಕು ಈಶ್ವರಪ್ಪಗೆ ಜೈಕಾರ ಹಾಕಿದ್ರು. ಅವರೆಲ್ಲರೂ ಬಿಜೆಪಿ ಕಾರ್ಯಕರ್ತರಲ್ಲ. ನನಗೆ ಪ್ರೀತಿ ತೋರಿದ ಕಾರ್ಯಕರ್ತರಿಗೆ ಸಾಷ್ಟಾಂಗ ನಮಸ್ಕಾರ ಹೇಳ್ತಿನಿ ಎಂದು ಈಶ್ವರಪ್ಪ ತಿಳಿಸಿದರು.
ಇಡಿ ರಾಜ್ಯದ ಜನ, ನನ್ನ ಕ್ಷೇತ್ರದಲ್ಲಿ ಗೆಲ್ಲಿಸಿದ ಜನ ನಮ್ಮ ಪರಿವಾರದ ಹಿರಿಯರು, ರಾಜ್ಯ ಹಾಗೂ ರಾಷ್ಟ್ರದ ನಾಯಕರು, ಮಂತ್ರಿಗಳು, ಶಾಸಕರು ಯಾರಿಗೂ ಕೂಡ ಇರುಸು ಮುರಿಸು ಆಗಬಾರದು. ನನ್ನ ವಿಚಾರದ ಬಗ್ಗೆ 3-4 ದಿನಗಳಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಮಾತನಾಡುತ್ತಿದ್ದೆ. ಎಲ್ಲ ಹಿರಿಯರ ಒಪ್ಪಿಗೆ ಪಡೆದು, ಯಾರಿಗೂ ಇರಿಸುಮುರಿಸು ಆಗಬಾರದು ಎಂಬ ಕಾರಣದಿಂದ ಎಲ್ಲರ ಒಪ್ಪಿಗೆ ಪಡೆದು ರಾಜೀನಾಮೆ ಕೊಟ್ಟಿದ್ದೇನೆ. ರಾಜೀನಾಮೆ ಕೊಡುವುದು ಬಲಪ್ರದರ್ಶನ ಅಲ್ಲ. ನಾನು ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದ್ದೆ. ಈ ವಿಷಯ ಹೇಳಿದಾಗ ನನ್ನ ಜೊತೆ ಬರುತ್ತೇನೆ ಅಂದ್ರು. ನಾನು ಒಂದು 3-4 ಕಾರಿನಲ್ಲಿ ಬರುತ್ತಾರೆ ಅಂದುಕೊಂಡಿದ್ದೆ. ಆದರೆ, ನೂರಾರು ಕಾರಿನಲ್ಲಿ ಬರುತ್ತಾರೆ ಅಂತಾ ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನ, ಸ್ನೇಹ, ಭಾಂಧವ್ಯ ಬೆಂಗಳೂರುವರೆಗೆ ಬಂದು ಬೆಂಬಲ ಕೊಟ್ಟಿದ್ದು ನನಗೂ ಸಂತೋಷ ಆಯ್ತು ಎಂದರು.
ಇನ್ನು ಬಿಜೆಪಿ ಕಾರ್ಯಕಾರಿಣಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಇದೇ 20 ಹಾಗೂ 21ರಂದು ನನ್ನ ಮೊಮ್ಮಗನ ಮದುವೆ ಸಮಾರಂಭ ಇರುವ ಕಾರಣ ಕಾರ್ಯಕಾರಿಣಿಗೆ ಹೋಗಲ್ಲ. ನಾನು ರಾಜ್ಯ ಅಧ್ಯಕ್ಷರಿಗೆ, ಮುಖ್ಯಮಂತ್ರಿ ಅವರಿಗೆ ಈಗಾಗಲೇ ನಾನು ಬರುತ್ತಿಲ್ಲ ಅಂತಾ ತಿಳಿಸಿದ್ದೇನೆ. ಇದೇ 19ರಂದು ಬಳ್ಳಾರಿಯಲ್ಲಿ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಮ್ಮ ಮನೆ ದೇವರು ಸಹ ಬಳ್ಳಾರಿಯಲ್ಲಿ ಇದೆ. ಮನೆ ದೇವರು ಪೂಜೆ ಮಾಡಿಕೊಂಡು ಬರುವವನಿದ್ದೇನೆ. 20 ರಂದು ನನ್ನ ಮೊಮ್ಮಗನ ಆರತಕ್ಷತೆ ಇದೆ. ಆ ಸಮಾರಂಭದಲ್ಲಿ ಸಿಎಂ ಭಾಗವಹಿಸುತ್ತಾರೆ ಎಂದು ಈಶ್ವರಪ್ಪ ತಿಳಿಸಿದರು.