ದೇವರಲ್ಲಿ ಅಚಲ ವಿಶ್ವಾಸವಿಟ್ಟರೆ ಎಲ್ಲರ ಜೀವನದಲ್ಲೂ ಬೆಳಕು ಮೂಡುವುದು ನಿಶ್ಚಿತ- ಈಸ್ಟರ್ ಸಂದೇಶ

ಶಿಲುಬೆಯ ಮೇಲೆ ಮೃತಪಟ್ಟ ಯೇಸುಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣವು ಅವರನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ಮೇಲೆ ದಿಗ್ವಿಜಯವನ್ನು ಸಾಧಿಸಿದರು. ಈ ಮೂಲಕ ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್‍ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ. ಕ್ಷಣಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ.

ಪುನರುತ್ಥಾನವೆಂದರೆ ಸಾವು, ನೋವು, ಚಿಂತೆ, ಹಸಿವು, ನೀರಡಿಕೆಗಳಿಲ್ಲದ ಆಹ್ಲಾದಕರ ಬದುಕು. ಯೇಸುಸ್ವಾಮಿ ಪುನರುತ್ಥಾನರಾಗಿ ಆ ಬದುಕಿನ ಭರವಸೆಯನ್ನು ನಮಗೆ ನೀಡಿದ್ದಾರೆ. ಇದೇ ಸತ್ಯವನ್ನು ಸಂಬ್ರಮಿಸುತ್ತದೆ ಪುನರುತ್ಥಾನದ ಹಬ್ಬ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ, ಕಾರಣ ದೇವರೆಡೆಗೆ ತಿರುಗಿ ಅವರನ್ನು ಒಪ್ಪಿಕೊಂಡರೆ, ನಿತ್ಯಜೀವ ಅವನದಾಗುವುದು ಎಂದು ಪಾಸ್ಖ ಹಬ್ಬ ಸಾರುತ್ತದೆ.

ಈ ಪುನರುತ್ಥಾನ ಹಬ್ಬ ನಮ್ಮೆಲ್ಲರನ್ನು ಅಂಧಕಾರದಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ದಾಟಿಸಿ ನಮ್ಮನ್ನು ಮರಣಭಯದಿಂದ ಮುಕ್ತಗೊಳಿಸಿ ಚಿರಂಜೀವಿಯಾಗಿಸಲಿ. ಪ್ರಸ್ತುತ ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಅಸೂಯೆ, ಕ್ರೋಧ ಹಾಗೂ ತಾರತಮ್ಯತೆಯ ಕೆಡುಕುಗಳು ನಮ್ಮಿಂದ ದೂರವಾಗಿ, ಸಕಲ ಧರ್ಮಗಳ ಜನರು ಸಹೋದರ-ಸಹೋದರಿಯರಾಗಿ ಜೀವಿಸುವಂತಾಗಲಿ. ಎಲ್ಲಾ ಸಹೋದರ-ಸಹೋದರಿಯರಿಗೂ ನಾನು ಪಾಸ್ಖ ಹಬ್ಬದ ಶುಭಾಷಯಗಳನ್ನು ಕೋರುತ್ತೇನೆ. ಮೃತ್ಯುಂಜಯ ಯೇಸುಸ್ವಾಮಿ ನಿಮ್ಮನ್ನು ಸದಾ ಆಶೀರ್ವದಿಸಿ ಕಾಪಾಡಲಿ.

Leave a Reply

Your email address will not be published. Required fields are marked *

error: Content is protected !!