ಗಂಗೊಳ್ಳಿ: ಧರ್ಮ ಉಳಿಯಲು ಆಯುಧ ಹಿಡಿಯಲೇ ಬೇಕು- ನೃಸಿಂಹಾಶ್ರಮ ಸ್ವಾಮೀಜಿ
ಗಂಗೊಳ್ಳಿ ಎ.16 (ಉಡುಪಿ ಟೈಮ್ಸ್ ವರದಿ): ಹಿಂದೂ ಜಾಗರಣ ವೇದಿಕೆ ವತಿಯಿಂದ ಗಂಗೊಳ್ಳಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ, ಶೋಭಾಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಹಂಗಾಕಟ್ಟೆ ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ಅವರು, ಸಮಾಜದಲ್ಲಿ ಶಾಂತಿ ಕೆಡಿಸುವಂತಹ ಅನೇಕ ಘಟನೆಗಳು ನಡೆಯುತ್ತಿದ್ದು, ಹಿಂದೂ ಸಮಾಜ ಈ ಬಗ್ಗೆ ಜಾಗೃತ ಗೊಳ್ಳಬೇಕು. ಪಠ್ಯದಲ್ಲಿ ಭಗವದ್ಗೀತೆ ಸೇರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ನಾವು ಧರ್ಮ ಜಾಗೃತರಾದರೆ ಮಾತ್ರ ಧರ್ಮ ಉಳಿಯುವುದು ಎಂದರು.
ಇದೇ ವೇಳೆ ಬರೀ ಕೈಯಲ್ಲಿ ನಾವು ಓಡಾಡಬಾರದು ಆಯುಧಗಳನ್ನು ಹಿಡಿದುಕೊಂಡ ಓಡಾಡಬೇಕು ಅದು ನಮಗೆ ಅನಿವಾರ್ಯವಾಗುತ್ತದೆ ಎಂದ ಅವರು, ನಾವು ಬದುಕ ಬೇಕಾದರೆ ಅಂತಹ ಅನಿವಾರ್ಯತೆಯನ್ನು ತಂದಿಟ್ಟಿದ್ದಾರೆ. ನಾವು ನಮಗೋಸ್ಕರ ಬದುಕಬೇಕು. ಧರ್ಮವನ್ನು ಉಳಿಸಬೇಕು ಎಂದಾದರೆ ನಾವು ಈ ರೀತಿಯ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಮಾತ್ರ ನಾವು ಹಿಂದೂ ಧರ್ಮವನ್ನು ಉಳಿಸಲು ಸಾಧ್ಯವಾಗುತ್ತದೆ. ಇಂತಹ ದಿನಗಳಲ್ಲಿ ನಾವು ಜಾಗೃತರಾಗಿರಬೇಕು ಎಂದರು. ಭಾರತದ ತಿಹಾಸವನ್ನು ಮರೆತು ನಿಷ್ಕ್ರಿಯರಾಗಬಾರದು ನಮ್ಮ ಇತಿಹಾಸವನ್ನು ಮಹಾನು ಪುರುಷರ ಇತಿಹಾಸವನ್ನು ತಿಳಿದಿರಬೇಕು ಧರ್ಮದ ರಕ್ಷಣೆಗೋಸ್ಕರ ನಾವು ಯಾವಾಗಲೂ ಆಯುಧವನ್ನು ಹಿಡಿದಂತವರೇ. ಅಂತಹ ಪರಿಸ್ಥಿತಿಯನ್ನು ಈಗಲೂ ತಂದಿಡುತ್ತಿದ್ದಾರೆ. ಆದರೆ ನಾವು ಜಾಗೃತರಾಗಬೇಕು. ಹಿಂದೂ ಜಾಗರಣ ವೇದಿಕೆ ಇಷ್ಟೋ ಸಮಯದಿಂದ ಈ ಕೆಲಸವನ್ನು ಮಾಡುತ್ತಿದೆ. ಆದರೆ ನಮ್ಮಲ್ಲಿರುವ ಜಾಗೃತಿ ಸಾಲದು ಎಂದರು. ಹಾಗೂ ಧರ್ಮದ ಆದಾರದಲ್ಲಿ ದೇಶ ವಿಭಜನೆ ಆದಾಗ ಇಲ್ಲಿನ ಸೆಕ್ಯೂಲರ್ ವಾದಿಗಳು ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಹೋಗಲು ಬಿಟ್ಟಿರಲಿಲ್ಲ. ಆದರೆ ಆಗಲೇ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಲು ಬಿಟ್ಟಿದ್ದರೆ ಇಂದು ಈ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಇದೇ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಗೆ ನಿರ್ಭಂಧ ಹೇರಿರುವ ಕುರಿತು ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರನ್ನು ಈ ಗ್ರಾಮಕ್ಕೆ ಬರಲು ನಿರ್ಬಂಧಿಸಿದ್ದಾರೆ. ಇದನ್ನು ನೋಡಿದಾಗ ನಾವು ಭಾರತದಲ್ಲಿ ಇದ್ದೇವೋ ಅಥವಾ ಪಾಕಿಸ್ಥಾನದಲ್ಲಿ ಇದ್ದೇವೋ ಎನ್ನುವಂತಾಗಿದೆ. ನಮ್ಮ ಸರಕಾರ ಎಂದು ಹೇಳಿಕೊಳ್ಳಲೂ ಸಾಚಿಕೆ ಆಗುತ್ತಿದೆ. ಯಾಕೆಂದರೆ ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಅಧಿಕಾರ ತೆಗೆದುಕೊಂಡವರು ಇಂದು ಮಾಡುತ್ತಿರುವುದನ್ನು ನೋಡಿದರೆ. ನಮಗೇ ನಮ್ಮ ಮೇಲೆ ಬೇಸರ ಆಗುತ್ತದೆ. ನಾವು ಇಂತಹವರಿಗೆ ಓಟು ಹಾಕಿದೆವಲ್ಲಾ ಎಂದು ಪಶ್ಚಾತಾಪ ಪಡುವಂತಾಗಿದೆ ಎಂದರು.
ಈ ವೇಳೆ ಮಾತನಾಡಿದ ಹಿಂದೂಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಂಡ್ಯಂತಾಯ ಅವರು, ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಹಿಂದೂ ಸಮಾಜವನ್ನು, ಧರ್ಮ ಸಮಾಜವನ್ನು, ಮಾನವೀಯತೆಯನ್ನು ನಾಶ ಮಾಡಲು ಮತಾಂಧ ಶಕ್ತಿಗಳು, ದೇಶ ದ್ರೋಹಿಗಳು ಹೊರಟಿದ್ದಾರೆ. ಅದಕ್ಕ ಇವರು ಬೆಂಬಲ ಸೂಚಿಸುತ್ತಾರೆಂದರೆ ಹಿಂದೂ ಸಮಾಜ ಕೈಕಟ್ಟಿಕುಳಿತು ಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಗೂ ಹಿಂದೂ ಸಮಾವನ್ನು ಜಾಗೃತಗೊಳಿಸಬೇಕಾದ ಅನಿವಾರ್ಯತೆ ಬಂದಿದೆ. ಹಿಜಾಬ್ ಹೆಸರಲ್ಲಿ ಶಿಕ್ಷಣಕ್ಕೆ ವಿಷ ಹಾಕಿದ ನಿಮ್ಮನ್ನು ನಾವು ಕ್ಷಮಿಸಬೇಕಾ ಎಂದು ಮರು ಪ್ರಶ್ನಿಸಿದರು. ಅಬ್ದುಲ್ ಕಲಾಮ್, ಸಂತ ಶಿಶುನಾಳ ಶರೀಫ ರಂತಹ ಸಮಾಜದಲ್ಲಿ ಯೋಗ್ಯರಿರುವ ವ್ಯಕ್ತಿಗಳನ್ನು ಆರಾಧನೆ ಮಾಡಿ ಅದು ಬಿಟ್ಟು ದೇಶ ದ್ರೋಹಿಗಳಿಗೆ ಸಹಾರ ನೀಡುವ ನಿಮ್ಮದು ಲೂಟಿಕೋರರ ತಂಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಈ ದೇಶವನ್ನು ಲೂಟಿ ಮಾಡಬೇಕು ಅಂದುಕೊಂಡಿದ್ದರೆ ಅದು ನಿಮ್ಮ ಹಗಲು ಗನಸು ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‍ನ ಉಪ್ಪುಂದದ ಮ್ಯಾನೆಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ಹೇರಿದ್ದ ಹಿನ್ನೆಲೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಂದೇಶ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ, , ನಾಯಕವಾಡಿ ಶ್ರೀಸಂಗಮೇಶ್ವರ ದೇಗುಲದ ಕಾರ್ಯದರ್ಶಿ ಜಿ.ಸುಬ್ಬ, ಖಾರ್ವಿ ಕೇರಿ ಶ್ರೀ ಮಹಾಂಕಾಳಿ ದೇಗುಲದ ಪಾತ್ರಿ ನಾಗರಾಜ ಖಾರ್ವಿ, ಕೋಟಿ ಚೆನ್ನಯ್ಯ ಗರಡಿಯ ಪಾತ್ರಿ ರಾಘವೇಂದ್ರ ಪೂಜಾರಿ, ಹಿಂದೂ ಜಾಗರಣಾ ವೇದಿಕೆ ಉಡುಪಿಯ ಪ್ರಶಾಂತ್ ನಾಯಕ್ ಉಪಸ್ಥಿತರಿದ್ದರು.