ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ತಮ್ಮ ಇಲಾಖೆಯ 29 ಪಿಡಿಒಗಳ ವರ್ಗಾವಣೆ ಮಾಡಿದ ಈಶ್ವರಪ್ಪ
ಬೆಂಗಳೂರು, ಏ.15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯ 29 ಪಿಡಿಒ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ದಿನವೇ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 29 ಪಿಡಿಒ ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲೂ ಮೈಸೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒಗಳ ವರ್ಗಾವಣೆಗೆ ಸಿಎಂ ಅನುಮೋದನೆ ನೀಡಿದ್ದಾರೆ. ಇದೀಗ ಸಚಿವ ಈಶ್ವರಪ್ಪ ಅವರು ದಿಢೀರನೇ 29 ಪಿಡಿಒ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎ.12 ರಂದು ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಪ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು.