ಈಶ್ವರಪ್ಪರನ್ನು ಬಂಧಿಸಬೇಕೇ ಬೇಡೆವೇ ತೀರ್ಮಾನ ತನಿಖಾಧಿಕಾರಿಗಳದ್ದು: ಸಿಎಂ ಬೊಮ್ಮಾಯಿ
ಗದಗ: ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕೇ ಬೇಡೆವೇ ಎಂಬುದನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗದಗ ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡು ದಿನಗಳ ಹಿಂದೆಯೇ ರಾಜೀನಾಮೆ ಬಗ್ಗೆ ತೀರ್ಮಾನಿಸಿದ್ದರು. ಹಿರಿಯರ ಸಲಹೆಯಂತೆ ರಾಜೀನಾಮೆ ಕೊಟ್ಟಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಕೆ.ಎಸ್ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂಬ ಕಾಂಗ್ರೆಸ್ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ನಲ್ಲೂ ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಕರ್ನಾಟಕ ಪೊಲೀಸರು ತನಿಖೆ ಮಾಡುವಾಗ ಮತ್ತು ಪ್ರಕರಣ ಸಿಬಿಐಗೆ ವರ್ಗಾವಣೆಯಾದಾಗಲೂ ಅವರ ಬಂಧನ ಆಗಲಿಲ್ಲ. ಇಂತಹ ಕಾಂಗ್ರೆಸ್ ನಾಯಕರಿಗೆ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ನೈತಿಕ ಹೊಣೆ ಹೊತ್ತು ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಪ್ರಕರಣದ ತನಿಖೆ ಆಗಿ ಸತ್ಯಾಂಶ ಹೊರಬರುವವರೆಗೆ ಸುಮ್ಮನಿರಬೇಕು ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ಹಾಗೂ ಪತ್ನಿನಿಗೆ ಸರ್ಕಾರಿ ನೌಕರಿ ವಿಚಾರದ ಬಗ್ಗೆ ಬೆಂಗಳೂರಿಗೆ ಹೋದ ನಂತರ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.