| ಮಧ್ಯಪ್ರದೇಶ ಎ.15: ಇಲ್ಲಿನ ಸೆಹೋರ್ ಎಂಬಲ್ಲಿ ತಂದೆಯೋರ್ವ ಹಾವನ್ನು ಹೊಡೆದು ಕೊಂದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಹಾವು ಬಂದು ಮಗನನ್ನು ಕಚ್ಚಿ ಸಾಯಿಸಿದ ವಿಚಿತ್ರ ಘಟನೆಯೊಂದು ನಡೆದಿದೆ.
ಮಧ್ಯಪ್ರದೇಶದ ಬುಧ್ನಿ ಜೋಶಿಪುರ ನಿವಾಸಿ ಕಿಶೋರ್ ಲಾಲ್ ಅವರ ಪುತ್ರ ರೋಹಿತ್ (12) ಹಾವು ಕಚ್ಚಿ ಸಾವನ್ನಪ್ಪಿದ ಬಾಲಕ. ಕೂಲಿ ಕಾರ್ಮಿಕನಾದ ಕಿಶೋರ್ ಎಂಬವರು ತನ್ನ ಮನೆಯ ಆಸುಪಾಸಿನಲ್ಲಿ ಹೋಗುತ್ತಿದ್ದ ಹಾವನ್ನು ಕೊಂದು ಬಳಿಕ ಮಣ್ಣಿನಲ್ಲಿ ಹೂತು ಹಾಕಿದ್ದರು. ಆದರೆ ವಿಚಿತ್ರ ಎಂಬಂತೆ ಅದೇ ದಿನ ರಾತ್ರಿ 2 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಕಿಶೋರ್ ಅವರ ಮಗನ ಕಾಲಿಗೆ ಮತ್ತೊಂದು ಹಾವು ಕಚ್ಚಿತ್ತು.ತಕ್ಷಣವೇ ಮಗನನ್ನು ಹೊಶಂಗಾಬಾದ್ ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮತ್ತೊಂದು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಈ ನಡುವೆ ಘಟನೆಗೆ ಸಂಬಂಧಿಸಿ ಗ್ರಾಮದಲ್ಲಿ ಅನೇಕ ರೀತಿಯ ಮಾತುಗಳು ಕೇಳಿ ಬರುತ್ತಿದ್ದು, ಅಲ್ಲದೆ ಹಾವುಗಳ ಹಾವಳಿ ಹೆಚ್ಚಿರುವುದರಿಂದಾಗಿ ಇಂತಹದ್ದೊಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ ಆದರೂ ಇದು ಸರ್ಪ ದೋಷದಿಂದಾಗಿ ನಡೆದಿರುವ ಘಟನೆಯಾಗಿದೆ ಎಂದು ಹೇಳುತ್ತಿದ್ದಾರೆ.
| |