ವಿರೋಧ ಪಕ್ಷದವರು ಜಡ್ಜ್ ಆಗುವುದೇನೂ ಬೇಕಿಲ್ಲ: ಕಾಂಗ್ರೆಸ್ ನಾಯಕರಿಗೆ ಸಿಎಂ ತಿರುಗೇಟು
ಹುಬ್ಬಳ್ಳಿ : ಇಂದು ಏಪ್ರಿಲ್ 15ರಂದು ಶುಕ್ರವಾರ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಕೆ ಎಸ್ ಈಶ್ವರಪ್ಪ ಅವರ ಬಂಧನ ಆಗಬೇಕೊ, ಬಿಡಬೇಕೊ ಎಂಬುದನ್ನು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಉದಾಹರಣೆಗೆ ಕಾಂಗ್ರೆಸ್ ಸರ್ಕಾರ ಜಾರ್ಜ್ ಅವರನ್ನು ಅರೆಸ್ಟ್ ಮಾಡಿರಲಿಲ್ಲ. ಸಿಬಿಐಗೆ ವಹಿಸಿದ ಬಳಿಕ ಅವರೂ ಅರೆಸ್ಟ್ ಮಾಡಿರಲಿಲ್ಲ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಇದ್ದರೂ ಅರೆಸ್ಟ್ ಮಾಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ತನಿಖೆಯಲ್ಲಿ ಲಭ್ಯವಾಗುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಗದಗಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರೇ ಪೊಲೀಸರಾಗುವುದು, ಪ್ರಾಸಿಕ್ಯೂಟರ್ ಆಗುವುದು, ಜಡ್ಜ್ ಆಗುವುದೇನೂ ಬೇಕಿಲ್ಲ. ತನಿಖೆ ಪೂರ್ಣ ಆಗುವವರೆಗೆ ತಾಳ್ಮೆಯಿಂದ ಇರಲಿ ಎಂದು ತಿರುಗೇಟು ಕೊಟ್ಟರು.
ಈ ಪ್ರಕರಣ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆ ಮುನ್ನಡೆ ಪ್ರಶ್ನೆ ಇಲ್ಲ. ಈಶ್ವರಪ್ಪ ಅವರು ಈಗಾಗಲೇ ಹೇಳಿದ್ದಾರೆ. ತಾವು ನಿರಪರಾಧಿ. ಆರೋಪಮುಕ್ತರಾಗಿ ಹೊರಬರುತ್ತೇನೆ. ತನಿಖೆ ಆಗಲಿ ಎಂದು ಹೇಳಿದ್ದಾರೆ. ಹೀಗಾಗಿ ತನಿಖೆ ಅಗಲಿ ಎಂದು ಹೇಳಿದರು. ಗದಗ ಜಿಲ್ಲೆಯ ತೋಂಟದಾರ್ಯ ಮಠದ ಕಾರ್ಯಕ್ರಮಕ್ಕೆ ತೆರಳಲು ಆಗಮಿಸಿದ್ದ ಸಿಎಂ ಬೊಮ್ಮಾಯಿಯವರಿಗೆ ಅಲ್ಲಿ ಕೂಡ ಕೆ ಎಸ್ ಈಶ್ವರಪ್ಪನವರ ರಾಜೀನಾಮೆ ಕುರಿತ ಪ್ರಶ್ನೆಗಳು ಸುದ್ದಿಗಾರರಿಂದ ಎದುರಾದವು.
ಅದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಸರ್ಕಾರ 1306.5 ಕೋ. ರೂ. ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ಗದಗ ಜಿಲ್ಲೆಗೆ ನೀಡಿದ್ದಾರೆ, ಅದರ ಬಗ್ಗೆ ಪ್ರಶ್ನೆ ಮಾಡಿ ಎಂದು ನಿಮ್ಮನ್ನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದಾಗ ಮುಖ್ಯಮಂತ್ರಿಗಳು ಸೇರಿದಂತೆ ನೆರೆದಿದ್ದವರು ನಕ್ಕರು. ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಗದಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ನಡೆದ ಜಟಾಪಟಿ ಬಗ್ಗೆ ಕೇಳಿದಾಗ, ಪ್ರಜಾಪ್ರಭುತ್ವದಲ್ಲಿ ಜನರ ಒಳಿತಿಗಾಗಿ ಹಲವಾರು ಚರ್ಚೆಗಳಾಗುತ್ತವೆ. ಜನರಿಗೆ ಒಳ್ಳೆಯದಾಗಬೇಕು ಎಂದಷ್ಟೇ ಹೋದರು.