ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಹೊಸ ತಿರುವು- ಲಾಡ್ಜ್’ಗೆ ಬಂದ ನಾಲ್ಕನೇ ವ್ಯಕ್ತಿ ಯಾರು…?
ಉಡುಪಿ ಎ.15 (ಉಡುಪಿ ಟೈಮ್ಸ್ ವರದಿ): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮತ್ತೋರ್ವ ಸ್ನೇಹಿತ ರಾಜೇಶ್ ಹೆಸರು ಕೇಳಿಬರುತ್ತಿದ್ದು, ಪ್ರಕರಣ ರಾಜೇಶ್ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಉಡುಪಿಯ ಶಾಂಭವಿ ಲಾಡ್ಜಿನಲ್ಲಿ ರೂಂ ಪಡೆಯುವ ವೇಳೆ ಸಂತೋಷ್ ಅವರು ರಾಜೇಶ್ ಅವರನ್ನು ಹೇಳಿರುವುದು ಬೆಳಕಿಗೆ ಬಂದಿದೆ. ಉಡುಪಿಗೆ ಪ್ರವಾಸಕ್ಕೆ ಬರುವ ಮೊದಲು ಚಿಕ್ಕಮಗಳೂರಿನ ಹೋಂ ಸ್ಟೇನಲ್ಲಿ ಒಂದೇ ಕೋಣೆಯಲ್ಲಿ ಮೂವರೂ ಸ್ನೇಹಿತರು ಉಳಿದುಕೊಂಡಿದ್ದರು ಆದರೆ ಉಡುಪಿಯಲ್ಲಿ ಸಂತೋಷ್ ಪಾಟೀಲ್ ಹಾಗೂ ಅವರ ಸ್ನೇಹಿತರು ಪ್ರತ್ಯೇಕ ರೂಮ್ ನಲ್ಲಿ ಉಳಿದುಕೊಂಡಿದ್ದರು.
ಈ ಪೈಕಿ ಸಂತೋಷ್ ಪಾಟೀಲ್ ಅವರ ಸ್ನೇಹಿತರಾದ ಪ್ರಶಾಂತ್ ಹಾಗೂ ಸಂತೋಷ್ ಒಂದು ರೂಮಿನಲ್ಲಿ ಉಳಿದುಕೊಂಡಿದ್ದು, ಸಂತೋಷ್ ಪಾಟೀಲ್ ಅವರು ಒಬ್ನರೇ ಮತ್ತೊಂದು ರೂಮಿನಲ್ಲಿ ಉಳಿದುಕೊಂಡಿದ್ದರು. ಸಂತೋಷ್ ಪಾಟೀಲ್ ಪ್ರತ್ಯೇಕ ಕೋಣೆಯಲ್ಲಿ ಇರುವುದಾಗಿ ತಿಳಿಸಿದಾಗ ಪ್ರತ್ಯೇಕ ಕೋಣೆ ಯಾಕೆ ಎಂದು ಕೇಳಿದ್ದಕ್ಕೆ, ಸ್ನೇಹಿತ ರಾಜೇಶ್ ಬರುತ್ತಾನೆ ಎಂದಿದ್ದರು. ಇದೀಗ ಸಂತೋಷ್ ಪಾಟೀಲ್ ಅವರು ತನ್ನೊಂದಿಗೆ ರೂಮ್ ನಲ್ಲಿ ಉಳಿದುಕೊಳ್ಳಲು ಬರುತ್ತಾನೆ ಎಂದು ಹೇಳಿದ ರಾಜೇಶ್ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಈ ನಿಟ್ಟಿನಲ್ಲಿ ಕೂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸುವ ವೇಳೆ ಕೂಡ ರಾಜೇಶ್ ಹೆಸರು ಪ್ರಸ್ತಾಪವಾಗಿದ್ದು, ಈ ವಿಚಾರವಾಗಿ ರಾಜೇಶ್ ಎಂಬ ವ್ಯಕ್ತಿ ಸಂತೋಷ್ ಪಾಟೀಲ್ ಅವರನ್ನು ಲಾಡ್ಜ್ ನಲ್ಲಿ ಭೇಟಿಯಾಗಬೇಕಿತ್ತಾ, ರಾಜೇಶ್ ಎಂಬ ವ್ಯಕ್ತಿ ಲಾಡ್ಜಿಗೆ ಬಂದಿದ್ದರಾ ಅಥವಾ ಪ್ರತ್ಯೇಕ ಕೋಣೆ ಪಡೆಯುವ ಉದ್ದೇಶದಿಂದ ಸಂತೋಷ್ ಪಾಟೀಲ್ ಅವರು ರಾಜೇಶ್ ಹೆಸರು ಹೇಳಿದ್ದರಾ..? ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದರೊಂದಿಗೆ ಲಾಡ್ಜ್ ನ ಸಿಸಿಟಿವಿ ಫುಟೇಜ್ ನ್ನು ಕೂಡಾ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.