ಈಶ್ವರಪ್ಪ ತಲೆದಂಡ! ಪರ್ಸೆಂಟೇಜ್ ವ್ಯವಹಾರಕ್ಕೆ ಬ್ರೇಕ್ ಹಾಕುತ್ತ ಹೈಕಮಾಂಡ್…?
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರಿಗೂ ವಿವಾದಕ್ಕೂ ಎಡೆ ಬಿಡದ ನಂಟು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜಿನಾಮೆ ನೀಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಸತತವಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದರು. ಇದು ಪಕ್ಷದ ನಾಯಕರ ಅಸಮಾದಾನಕ್ಕೂ ಕಾರಣವಾಗಿತ್ತು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ ಅವರು ಅಂತಿಮ ಬೆಲೆ ತೆರಬೇಕಾಯಿತು.
ಫೆಬ್ರವರಿ ತಿಂಗಳಿನಲ್ಲಿ ಶಿವಮೊಗ್ಗದ ಶಾಲೆಯೊಂದರಲ್ಲಿ ಧ್ವಜದ ಕಂಬದ ಮೇಲೆ ಕೇಸರಿ ಬಾವುಟ ಹಾರಿಸಿದ್ದು ಸುದ್ದಿಯಾಗಿತ್ತು, ಇದನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಭರದಲ್ಲಿ ಮುಂದೊಂದು ದಿನ ಕೆಂಪುಕೋಟೆ ಮೇಲೂ ಭಗವಾಧ್ವಜ ಹಾರಿಸುವ ಸನ್ನಿವೇಶ ಬರಬಹುದು ಎಂಬ ಅರ್ಥದಲ್ಲಿ ಈಶ್ವರಪ್ಪ ಮಾತನಾಡಿದ್ದರು. ಕಾಂಗ್ರೆಸ್‌ಗೆ ಇಷ್ಟೇ ಸಾಕಾಯಿತು. ಕೇಸರಿ ಧ್ವಜದ ವಿಚಾರ ಜಂಟಿ ಅಧಿವೇಶನದಲ್ಲಿ ಪ್ರತಿಧ್ವನಿಸಿತ್ತು.
ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್ ಶಾಸಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಈಶ್ವರಪ್ಪ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆಯೂ ಆಗ್ರಹಿಸಿದ್ದರು. ಈ ಗಲಾಟೆ ನಡುವೆಯೇ ಜಂಟಿ ಅಧಿವೇಶನ ಮುಕ್ತಾಯಗೊಂಡಿತು. ಕೇಸರಿ ಧ್ವಜದ ಬಗ್ಗೆ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದು ಕೊಂಡಿದ್ದರೂ ಈಶ್ವರಪ್ಪ ವಿಚಲಿತರಾಗಿರಲಿಲ್ಲ. ರಾಜ್ಯ ಬಿಜೆಪಿ ಪ್ರಮುಖರೂ ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ, ರಾಷ್ಟ್ರ ಮಟ್ಟದಲ್ಲಿ ಈ ವಿವಾದ ಸದ್ದು ಮಾಡುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಧ್ಯೆ ಪ್ರವೇಶಿಸಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಬಾರದೆಂದು ಸೂಚಿಸಿದ್ದರು.
ಫೆಬ್ರವರಿ 20 ರಂದು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದಾಗ ಪ್ರಾಥಮಿಕ ತನಿಖೆ ನಡೆಸದೆಯೇ ಈಶ್ವರಪ್ಪ ಅವರನ್ನು “ಮುಸ್ಲಿಂ ಗೂಂಡಾಗಳು” ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹರ್ಷ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಸಹ ಆಯೋಜಿಸಿದರು, ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಪ್ರಿಲ್ 8 ರಂದು ಶಿವಮೊಗ್ಗ ಪೊಲೀಸರು ಈಶ್ವರಪ್ಪ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
ಈಶ್ವರಪ್ಪ ಸದನದಲ್ಲಿ ಮತ್ತು, ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಸದಾ ತಮ್ಮ ನಾಲಗೆ ಹರಿಬಿಡುತ್ತಿದ್ದರು. “ಕ್ರೈಸ್ತರು ಮತ್ತು ಮುಸ್ಲಿಮರು ಮುಂದೊಂದು ದಿನ ಆರ್‌ಎಸ್‌ಎಸ್ ಆಗುತ್ತಾರೆ” ಎಂದು ಅವರು ಇತ್ತೀಚೆಗೆ ಹೇಳಿದ್ದರು. ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಮೊದಲ ಸಾಲಿನ ಲೀಡರ್ ಎನಿಸಿಕೊಂಡವರು. ಚುನಾವಣಾ ರಾಜಕಾರಣದಲ್ಲಿ ಗೆಲ್ಲಲಿ ಅಥವಾ ಸೋಲಲಿ. ಎಲ್ಲ ಸಂದರ್ಭದಲ್ಲೂ ಈಶ್ವರಪ್ಪ ಅವರಿಗೆ ಪಕ್ಷ ಪ್ರಮುಖ ಸ್ಥಾನಮಾನಗಳನ್ನು ನೀಡಿತ್ತು.