| ಬೈಂದೂರು ಎ.15 (ಉಡುಪಿ ಟೈಮ್ಸ್ ವರದಿ): ನಾವುಂದದ ಬಡಾಕೆರೆ ಬಸ್ ನಿಲ್ದಾಣದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರ ವಾಹನದ ಸಹ ಸವಾರರ ಚಿಕಿತ್ಸೆಗೆ ಹಣ ನೀಡುವುದಾಗಿ ತಿಳಿಸಿ ಬಳಿಕ ನೀಡದೆ ಇರುವುದಾಗಿ ಬೈಕ್ ಸವಾರನ ವಿರುದ್ಧ ಜನಾರ್ದನ ಆಚಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಎ.12 ರಂದು ಬೆಳಿಗ್ಗೆ ಬೈಂದೂರಿನ ಜನಾರ್ಧನ ಆಚಾರಿ ಅವರು, ಪ್ರಸನ್ನ ಆಚಾರಿ ಎಂಬವರೊಂದಿಗೆ ಸ್ಕೂಟರ್ ನಲ್ಲಿ ಸಹಸವಾರರಾಗಿ ಪ್ರಯಾಣಿಸುತ್ತಿದ್ದ ವೇಳೆ ಬಡಾಕೆರೆ ಬಸ್ ನಿಲ್ದಾಣದ ಸಮೀಪ ಬೀದಿ ನಾಯಿಯೊಂದು ಒಮ್ಮೇಲೆ ರಸ್ತೆಗೆ ಅಡ್ಡ ಓಡಿ ಬಂದಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಪ್ರಸನ್ನ ಆಚಾರಿ ಒಮ್ಮೇಲೆ ಸ್ಕೂಟರ್ ಗೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ರಸ್ತೆಗೆ ಬಿದ್ದಿದೆ. ಇದರಿಂದ ಜನಾರ್ಧನ ಆಚಾರಿ ರವರ ಕಾಲುಗಳು ಹಾಗೂ ಬೆನ್ನು ಮೂಳೆ ಜಖಂ ಆಗಿದ್ದು, ಸವಾರ ಪ್ರಸನ್ನ ಆಚಾರಿಯವರಿಗೆ ಕೈಗೆ ಮತ್ತು ಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿತ್ತು. ಈ ವೇಳೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜನಾರ್ಧನ ಆಚಾರಿ ರವರಿಗೆ ಚಿಕಿತ್ಸೆಯ ವೆಚ್ಚ ನೀಡುವುದಾಗಿ ಪ್ರಸನ್ನ ಆಚಾರಿ ತಿಳಿಸಿದ್ದ. ಆದರೆ ಚಿಕಿತ್ಸೆಯ ವೆಚ್ಚ ದೊಡ್ಡ ಮೊತ್ತ ಆಗಿರುವುದರಿಂದ ಮೊತ್ತವನ್ನು ಕೊಡಲು ಪ್ರಸನ್ನ ಆಚಾರಿ ನಿರಾಕರಿಸಿದ್ದಾನೆ ಎಂಬೂದಾಗಿ ಜನಾರ್ದನ ಆಚಾರಿ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |