ಹಾವಂಜೆ: ‘ಭೀಮ್ ಜಯಂತೋತ್ಸವ’
ಉಡುಪಿ: ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ‘ಭೀಮ್ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಯಿಂದ ಬುದ್ದವಂದನೆ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಮುಖ್ಯಭಾಷಣಕಾರರಾಗಿ.ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ನಾವು ಇಂದು ಸ್ಮರಣೆ ಮಾಡುವ ಅಗತ್ಯವೇ ಇರಲಿಲ್ಲ.ಹಾಗೆಯೇ ಇವರು ಸಾರ್ವತ್ರಿಕ ನೆಲೆಯಲ್ಲಿ ಭಾರತೀಯರ ಸ್ಮರಣೆಯಲ್ಲಿಯೂಉಳಿಯುತ್ತಿರಲಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಪ್ರಜೆಯು ಇಂದು ಬಾಬಾಸಾಹೇಬರನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರೆ ಅದಕ್ಕೆ ಕಾರಣ ಈ ನಿಸ್ವಾರ್ಥ ವ್ಯಕ್ತಿತ್ವದ ಹಿರಿಮೆಯ ಪ್ರತೀಕವೇ ಸರಿ ಎಂದರು.
ಭಾರತೀಯರಾದ ನಾವು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಭಾರತವನ್ನು ಒಂದು ಕ್ಷಣ ಕಣ್ಣು ಮುಚಿ ಸ್ಮರಿಸಿಕೊಂಡರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಭೀಮಶಕ್ತಿಯ ಸಾಹಸಮಯ ಹೋರಾಟದ ಬದುಕು ಅರ್ಥವಾಗುತ್ತದೆ. ಇಂದು ಹಿಂದುತ್ವದ ಹೆಸರಿನಲ್ಲಿ ಕೋಮುವಾದಿಗಳ ಕೈಗೊಂಬೆಯಾಗಿ ಕುಣಿಯುತ್ತ, ಈ ನೆಲದ ಸಾಮರಸ್ಯವನ್ನು ತಮ್ಮ ಕೈಯಾರೆ ಕೆಡಿಸುತ್ತಿರುವ ಶೂದ್ರ ಸಮುದಾಯದ ಯುವ ಸಮುದಾಯವು ಒಂದು ಕ್ಷಣ ಎಂಬತ್ತು ವರ್ಷಗಳ ಹಿಂದಿನ ತಮ್ಮ ಪೂರ್ವಜರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡರೆ ಬ್ರಾಹ್ಮಣ್ಯದ ತಾಳಕ್ಕೆ ಕುಣಿಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಒಬ್ಬ ಮುಂದುವರೆದ ಜಾತಿಯ ಶೂದ್ರನನ್ನು ಅಂಬೇಡ್ಕರ್ ಯಾರು ಎಂದು ಕೇಳಿದರೆ ಅವನ ಬಾಯಿಯಿಂದ ಸಹಜವಾಗಿಯೇ ಹೊರಹೊಮ್ಮುವ ಮಾತು ಅವರೊಬ್ಬ ‘ಹೊಲೆಯ ಮಾದಿಗ’ ಸಮುದಾಯದ ನಾಯಕ ಎಂಬುದೇ ಆಗಿರುತ್ತದೆ. ಆದರೆ ಈ ಭೀಮ ಶಕ್ತಿ ನನಗೆಷ್ಟು ಸ್ವಾಭಿಮಾನ, ಸ್ವಾವಲಂಬನೆಯನ್ನು ಕಲ್ಪಿಸಿಕೊಟ್ಟಿದೆ ಎಂಬ ಅರಿವು ಶೂದ್ರರಿಗೆ ಇಲ್ಲವಾಗಿದೆ. ಇದು ಆ ವ್ಯಕ್ತಿ ಅಥವಾ ಸಮುದಾಯದ ತಪ್ಪಲ್ಲ ಎಂದು ಹೇಳಿದರು. ಅವರ ತಲೆಯೊಳಗೆ ಅಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಮೂಲಭೂತವಾದಿಗಳು ತುಂಬಿರುವ ಹುಸಿ ಹುನ್ನಾರಗಳಿವು. ಅಂಬೇಡ್ಕರ್ ಎಂಬ ಈ ವ್ಯಕ್ತಿತ್ವ ಭಾರತದ ನೆಲದಲ್ಲಿ ಜನ್ಮತಳೆಯದೆ ಹೋಗಿದ್ದರೆ ನಾವೆಲ್ಲ ಶಿಕ್ಷಣ, ರಾಜಕೀಯ, ಅಧಿಕಾರದಿಂದ ಹೊರಗುಳಿದು ಜೀತ ಮಾಡಬೇಕಾದ ಪರಿಸ್ಥಿತಿ ಇನ್ನೂ ಜೀವಂತವಾಗಿರುತ್ತಿತ್ತು ಎಂಬುದು ಶೂದ್ರ ಸಮುದಾಯಗಳಿಗೆ ಅರ್ಥವಾಗಿಯೇ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ನೂರ್ ಜುಮ್ಮಾ ಮಸ್ಜಿದ್ ಕುಂಜಾಲು, ಮೊಹಮ್ಮದ್ ಶಫೀಕ್ ನಿಜಾಮಿ ಖತೀಜರು ಮತ್ತು ಧರ್ಮ ಗುರುಗಳು ಸೇಕ್ರೇಟ್ ಹಾರ್ಟ್ ಚರ್ಚ್ ಕೊಳಲಗಿರಿ, ಅನಿಲ್ ಪ್ರಕಾಶ್ ಕ್ಯಾಸ್ತೋಲಿನ್ ಹಾಗೂ ಸುರೇಶ್ ಬಿ ಶೆಟ್ಟಿ ಇರ್ಮಾಡಿ ಆಡಳಿತ ಮುಕ್ತೇಸರು,ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ,
ಕಾರ್ಯಕ್ರಮದ ಅದ್ಯಕ್ಷತೆಯನ್ನು ರಾಜ್ಯಖಜಾಂಜಿ ಕದಸಂಸ ಭೀಮವಾದ ಕರ್ನಾಟಕ, ಎಸ್ ಡಿ ರಾಯಮಾನೆ ವಹಿಸಿದ್ದರು.ರಾಜ್ಯ ಸಂಘಟನಾ ಸಂಚಾಲಕರು ಕದಸಂಸ ಭೀಮವಾದ ಉಡುಪಿ, ಶೇಖರ್ ಹಾವಂಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.