ಸಿಪಿಎಂ ನ ಹಿರಿಯ ನಾಯಕ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಇನ್ನಿಲ್ಲ
ಚಿಕ್ಕಬಳ್ಳಾಪುರ ಎ.15: ಸಿಪಿಎಂ ನ ಹಿರಿಯ ನಾಯಕ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಾಗೇಪಲ್ಲಿಯಲ್ಲಿರುವ ಸ್ವಗೃಹದಲ್ಲಿ ಇಂದು ಬೆಳಗ್ಗೆ 6:45ರ ಸುಮಾರಿಗೆ ಜಿ.ವಿ ಶ್ರೀರಾಮ ರೆಡ್ಡಿ (67) ಅವರು ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಿಪಿಎಂ ಪಕ್ಷದಿಂದ 1999 ಮತ್ತು 2004ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತರಾಗಿದ್ದರು. ಶ್ರೀರಾಮರೆಡ್ಡಿಯವರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಷ್ಟೂ ದಿನ ಎಡ ಯುವಜನ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಸಕ್ರಿಯವಾಗಿದ್ದವು.
ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಳೆ ರಾಜ್ಯದಲ್ಲಿ ಎಡಪಂಥೀಯ ಚಳವಳಿಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಶ್ರೀರಾಮ ರೆಡ್ಡಿಯವರದ್ದು. ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಶ್ರೀರಾಮ ರೆಡ್ಡಿಯವರು ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸಂಸ್ಕೃತಿಕ ರಾಜಕಾರಣವನ್ನು ರಾಜ್ಯದೆಲ್ಲೆಡೆ ಚುರುಕುಗೊಳಿಸಿದ್ದರು. ರಾಜ್ಯದಲ್ಲಿರುವ ಹಲವು ಬಂಡಾಯ ಸಾಹಿತ್ಯ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳನ್ನು ಕಟ್ಟುವಲ್ಲಿ ಶ್ರೀರಾಮರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದರು.
ಆದರೆ 2018ರಲ್ಲಿ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪದಲ್ಲಿ ಜಿ.ವಿ.ಶ್ರೀರಾಮ ರೆಡ್ಡಿ ಅವರನ್ನು ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಬಳಿಕ ಜಿಲ್ಲೆಯಲ್ಲಿ ಪ್ರಜಾ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದ್ದ ಶ್ರೀರಾಮರೆಡ್ಡಿ ಆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿ ದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದೂ ಘೋಷಿಸಿದ್ದರು.