ರಾಜ್ಯದ ಅತಿ ಭ್ರಷ್ಟಆರೋಗ್ಯ ಸಚಿವ ಸುಧಾಕರ್ ರಾಜಿನಾಮೆ ಪಡೆದು ತನಿಖೆಗೆ ಒಳಪಡಿಸಿ- ಆಮ್ ಆದ್ಮಿ ಆಗ್ರಹ

ಬೆಂಗಳೂರು, ಎ.15: ಡಾ.ಕೆ. ಸುಧಾಕರ್ ಅವರು ರಾಜ್ಯ ಸಚಿವ ಸಂಪುಟದಲ್ಲಿರುವ ಅತಿ ಭ್ರಷ್ಟ ಸಚಿವರಾಗಿದ್ದು, ಅವರ ರಾಜಿನಾಮೆ ಪಡೆದು ತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ವಿಚಾರವಾಗಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಎಪಿ ಮುಖಂಡ ಮೋಹನ್ ದಾಸರಿ ಅವರು, ಆರೋಗ್ಯ ಇಲಾಖೆಯ ಸಾಲುಸಾಲು ಹಗರಣಗಳು ವರದಿಯಾಗುತ್ತಿವೆ. ಆದರೂ ಅವರ ವಿರುದ್ಧ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆರೋಗ್ಯ ಸಚಿವ ಸುಧಾಕರ್ ಅವರಿಂದ ರಾಜೀನಾಮೆ ಪಡೆದು ಹಗರಣಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಆರೋಗ್ಯ ಇಲಾಖೆಯು 2020ರ ಸೆ.23ರಂದು ನೀಡಲಾದ KDL/EQPT/ TND/LE-3 ಭಾಗ HAE/103/2020-21 ಹಾಗೂ KDL/EQPT/ Re-TND/LE-5  ಭಾಗ HA/104/2020-21  ಸಂಖ್ಯೆಯ ಟೆಂಡರ್‍ನಲ್ಲಿ ಅಕ್ರಮವಾಗಿದೆ. ಸಚಿವ ಸುಧಾಕರ್ ಅವರ ಅಣತಿಯಂತೆ, ಬಯೋ ಕೆಮಿಸ್ಟ್ರಿ ಮತ್ತು ಹೆಮಟೋಲಜಿ ಉಪಕರಣಗಳ ಗುತ್ತಿಗೆಯನ್ನು ಸಚಿವರ ಆಪ್ತ ಕಂಪನಿಗೆ ನೀಡಲಾಗಿದೆ. ಈ ಬಗ್ಗೆ ಕಳೆದ ವರ್ಷವೇ ನಾವು ದಾಖಲೆ ಬಿಡುಗಡೆ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆರೋಗ್ಯ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರವಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬುಧವಾರ ನೀಡಿದ ಹೇಳಿಕೆಯನ್ನು ಪಕ್ಷವು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಒಂದು ಅಲ್ಪಾವಧಿ ಗುತ್ತಿಗೆಯನ್ನು ರದ್ದು ಮಾಡಿ ಮರುಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಆದರೂ ಬದಲಾವಣೆ ಮಾಡಿದ್ದಾರೆ. ಟೆಂಡರ್ ನಲ್ಲಿ ಕೇವಲ ಒಂದೇ ಬಿಡ್ ಬಂದಿದ್ದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ ಎಂದು ಅವರು ಪ್ರಶ್ನಿಸಿದರು.

ಸಿಸ್ಮೆಕ್ಸ್ ಎಂಬ ಕಂಪನಿಯಿಂದ ತ್ರೀ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರಕಾರವು 1,80,540 ರೂ.ಗೆ, ಹಿಮಾಚಲ ಪ್ರದೇಶ ಸರಕಾರವು 1,30,000 ರೂಪಾಯಿಗೆ ಮತ್ತು ದೆಹಲಿಯಮುನಿಸಿಪಾಲಿಟಿ 1,44,000 ರೂಪಾಯಿಗೆ ಖರೀದಿಸಿದೆ. ಆದರೆ ನಮ್ಮ ಕರ್ನಾಟಕ ಸರಕಾರವು ಅದೇ ಉಪಕರಣಕ್ಕೆ ಬರೋಬ್ಬರಿ 2,96,180 ರೂ. ನೀಡಿ ಖರೀದಿಸಿದೆ. ಒಟ್ಟು 1,195 ಉಪಕರಣ ಖರೀದಿಸಲು 19.85 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ಅದೇ ರೀತಿ ಫೈವ್ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್‍ಗಳನ್ನು ಸಿಸ್ಮೆಕ್ಸ್ ಕಂಪನಿಯು ಕೇರಳ ಸರಕಾರಕ್ಕೆ 4.60 ಲಕ್ಷ ರೂಪಾಯಿಗೆ ನೀಡಿದೆ. ಆದರೆ ಕರ್ನಾಟಕ ಸರಕಾರವು ಅದೇ ಕಂಪನಿ ಯಿಂದ 8.35 ಲಕ್ಷ ರೂಪಾಯಿಯಂತೆ ಖರೀದಿಸಿದೆ. ಒಟ್ಟು 165 ಈ ಉಪಕರಣಗಳ ಖರೀದಿಯಿಂದಾಗಿ 6.18 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ ಎಂದರು. ಗೋಷ್ಠಿಯಲ್ಲಿ ಎಎಪಿಯ ವಕ್ತಾರ ಉಷಾ ಮೋಹನ್ ಹಾಗೂ ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!