ಉಡುಪಿ: ಪ್ರಮೋದ್ ಮುತಾಲಿಕ್’ಗೆ ನಿರ್ಬಂಧ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ

ಕಡತ ಚಿತ್ರ

ಉಡುಪಿ ಎ14: ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ನಾಳೆ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆ ಹಿನ್ನೆಲೆ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಭಾಗವಹಿಸದಂತೆ ಶ್ರೀರಾಮ‌ಸೇನೆ‌ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ಹೇರಿರುವ ನಿರ್ಬಂಧಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಐವರು ಶಾಸಕರು ಹಾಗೂ ಇಬ್ಬರು ಸಚಿವರಿದ್ದರೂ ಕೂಡ ಈ ಆದೇಶ ಯಾಕೆ ಬಂತು? ಇದರ ಹಿಂದೆ ಯಾರಿದ್ದಾರೆ? ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗದ ಸಚಿವರು ಶಾಸಕರು ಇರುವುದು ನಮ್ಮ ದೌರ್ಭಾಗ್ಯ ಎಂದು ಬರೆದಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಾಗೂ ನಾಳೆಯ ಬೆಳಿಗ್ಗೆ ಹಾಗೂ ಸಂಜೆಗಿನ ನಿಗಧಿತ ಕಾರ್ಯಕ್ರಮ ನಡೆದೇ ನಡೆಯುತ್ತದೆ‌. ಮುತಾಲಿಕ್ ಅವರಿಗೆ ನಿರ್ಬಂಧ ಹೇರಿರುವುದನ್ನು ಜಿಲ್ಲಾಡಳಿತ‌ ಹಿಂಪಡೆಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಯಶವಂತ್ ಗಂಗೊಳ್ಳಿ ಆಗ್ರಹಿಸಿದ್ದಾರೆ. ಈ ನಡುವೆ ಕೆಲವು ವಾಟ್ಸಾಪ್ ಹಾಗೂ ಫೇಸ್ಬುಕ್ ಪೋಸ್ಟ್‌ಗಳಲ್ಲಿ ಮುತಾಲಿಕ್ ಗಂಗೊಳ್ಳಿಗೆ ಬಂದೇ ಬರುತ್ತಾರೆ. ಯಾವುದೇ ಗೊಂದಲ ಬೇಡ ಎಂಬ ಸಂದೇಶಗಳೂ ಹರಿದಾಡುತ್ತಿದ್ದು ನಾಳೆ ನಡೆಯಲಿರುವ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ.

ಇನ್ನು ಶ್ರೀರಾಮಸೇ‌ನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಗೊಳ್ಳಿಗೆ ಆಗಮಿಸಿ ಪ್ರಚೋದನಾಕಾರಿ ಭಾಷಣ ಮಾಡಿದಲ್ಲಿ ಕಾನೂನು‌ ಸುವ್ಯವಸ್ಥೆಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಇದೀಗ ಈ ಆದೇಶ ಹೊರ ಹೊರಬೀಳುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!