ಮಲ್ಪೆ: ರಾಡ್ ನಿಂದ ಹೊಡೆದು ಮೀನುಕಾರ್ಮಿಕನ ಹತ್ಯೆ

ಉಡುಪಿ: ಮಲ್ಪೆ ಬಾಪುತೋಟ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮೀನು ಕಾರ್ಮಿಕರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದವರನ್ನು ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ 35 ವರ್ಷದ ಮಹಾಂತೇಶ್ ಎಂದು ಗುರುತಿಸಲಾಗಿದೆ.

ಹೊನ್ನಾವರ ತಾಲೂಕಿನ ಬೇಳೆಕೆರೆಯ 26 ವರ್ಷದ ನಾಗರಾಜ್ ಕೊಲೆ ಆರೋಪಿ. ಇವರು ಇತರ ಮೀನುಗಾರರೊಂದಿಗೆ ಶ್ರೀಗುರು ಸಿದ್ದಿ ಬೋಟಿನಲ್ಲಿ ಮೀನುಗಾರಿಕೆ ಮುಗಿಸಿ ಎ.13ರಂದು ಮಲ್ಪೆ ಬಂದರಿಗೆ ಆಗಮಿಸಿದ್ದರು. ಬೋಟು ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿ, ಬೋಟಿನ ಕಲಾಸಿಗಳಾದ ಬರಮಪ್ಪ ಮತ್ತು ಮಹಾಂತೇಶ ಮಲ್ಪೆ ಪೇಟೆಗೆ ಹೋಗಿದ್ದರು. ಅಲ್ಲಿಂದ ಇವರಿಬ್ಬರು ರಾತ್ರಿ ಸ್ನೇಹಿತ ಶಾಂತಪ್ಪ ಜೊತೆ ಬೋಟಿಗೆ ಬಂದಿದ್ದರು. ಬೋಟಿನಲ್ಲಿ ಇತರ ಕಲಾಸಿಗರಾದ ಉಮೇಶ ಮತ್ತು ನಾಗರಾಜ ಮಲಗಿದ್ದರು.

ಮಹಾಂತೇಶ್ ಹಾಗೂ ಇತರ ಇಬ್ಬರು ಊಟ ಮಾಡುವುದಕ್ಕಾಗಿ ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು, ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು. ಹೀಗೆ ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶ್‌ಗೆ ಹಲ್ಲೆ ಮಾಡಿ, ಕಬ್ಬಿಣದ ಗೇರ್ ರಾಡ್‌ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದನು ಎಂದು ದೂರಲಾಗಿದೆ.

ಇದನ್ನು ತಡೆಯಲು ಹೋದ ಬರಮಪ್ಪಗೂ ನಾಗರಾಜ್ ರಾಡ್‌ನಿಂದ ಹಲ್ಲೆ ಮಾಡಿದನು. ಗಂಭೀರವಾಗಿ ಗಾಯಗೊಂಡ ಮಹಾಂತೇಶರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಇವರು ಎ.14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!