ಮುಸ್ಲೀಮರು ಪಾಕಿಸ್ಥಾನ ಹೋಗುತ್ತಿದ್ದರೆ ರಾಜ್ಯದಲ್ಲಿ ಬಿಜೆಪಿಗೆ 10 ಸೀಟು ಕೂಡಾ ಸಿಗುತ್ತಿರಲಿಲ್ಲ- ದಿನೇಶ್ ಅಮೀನ್ ಮಟ್ಟು

ಉಡುಪಿ ಎ.14 (ಉಡುಪಿ ಟೈಮ್ಸ್ ವರದಿ): ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಹಬಾಳ್ವೆ ಉಡುಪಿ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ವತಿಯಿಂದ ಇಂದು ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಸಹಬಾಳ್ವೆಯ ದಿನವನ್ನು ಆಚರಿಸಲಾಯಿತು.

ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು, ಸಂವಿಧಾನ ನಮ್ಮ ಧರ್ಮ ಆಗಬೇಕು ಅಂಬೆಡ್ಕರ್ ನಮ್ಮ ದೇವರಾಗಬೇಕು. ಅಂಬೆಡ್ಕರ್ ಅವರು ದಲಿತರಪರ ಚಿಂತಕರು ಮಾತ್ರ ಆಗಿರದೆ, ಓರ್ವ ವಿಶ್ವದ ಅತ್ಯುತ್ತಮ ಕಾನೂನು ತಜ್ಞ, ಆರ್ಥಿಕ ತಕ್ಞ ಹಾಗೂ ಉತ್ತಮ ಪತ್ರಕರ್ತ, ಲೇಖಕರಾಗಿದ್ದರು. ಅವರ ಆರ್ಥಿಕ ಚಿಂತನೆಗಳನ್ನು ಕಡೆಗಣಿಸಿದ ಪರಿಣಾಮ ಇಂದು ನಾವು ಅನುಭವಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಒಂದು ಮತ ಒಂದು ಮೌಲ್ಯ ಎಂದು ಹೇಳುತ್ತೆ. ಆದ್ರೆ ಇಂದಿನ ನಮ್ಮ ಪ್ರಜಾ ಪ್ರಭುತ್ವದಲ್ಲಿ ಅದಾನಿಯ ಒಂದು ಮತ ಮತ್ತು ನಮ್ಮ ಒಂದು ಮತಕ್ಕೆ ಒಂದು ಮೌಲ್ಯ ಅಲ್ಲ. ನಮ್ಮಂತವರು ಕೋಟ್ಯಾಂತರ ಜನರ ಆದಾಯ ಸೇರಿದರೂ ಇಡೀ ದೇಶದ 80 ಶೇ. ದಷ್ಟು ಜನರ ತಲಾ. 20 ರೂ. ಆದರೆ ಅಂಬಾನಿಯ ಒಬ್ಬರ ಸರಾಸರಿ ವಾರ್ಷಿಕ ಲಾಭ ಒಟ್ಟು ಎರಡು ವರೆಯಿಂದ 3 ಲಕ್ಷ ಕೋಟಿ ರೂ. ಇದು ರಾಜ್ಯದ ಬಜೆಟ್ ಗಿಂತಲೂ ಹೆಚ್ಚು. ಇದು ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಿದುದರ ಪರಿಣಾಮ ಎಂದರು. 

ಅಂಬೇಡ್ಕರ್ ಅವರನ್ನು ಮುಸ್ಲಿಂ ವಿರೋಧಿ ಎಂದು ಪ್ರಚಾರ ಮಾಡುವ ವ್ಯವಸ್ಥಿತ ಕಾರ್ಯ ಹಲವು ಕಡೆಗಳಲ್ಲಿ ನಡೆಯುತ್ತಿದೆ ಎಂದ ಅವರು, ಅಂಬೆಡ್ಕರ್ ಅವರು ಭಾರತದ ವಿಭಜನಾ ಪರವಾಗಿದ್ದರು ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಅಂಬೆಡ್ಕರ್ ಅವರು ಹಿಂದುಗಳ ಮನೋಭಾವವನ್ನು ಅರಿತಿದ್ದರು ಆದ್ದರಿಂದ ಮುಸ್ಲಿಮರು ಪ್ರತ್ಯೇಕ ರಾಷ್ಟ್ರ ಕಟ್ಟಿಕೊಂಡು ಸುಖವಾಗಿ ಇರಲಿ ಎಂದು ಅವರು ಆಲೋಚಿಸಿದ್ದರು. ಆದರೆ ಈ ಬಗ್ಗೆ ಸಂಪುರ್ಣ ಮಾಹಿತಿ ನೀಡದೇ, ಕೇವಲ ಅಂಬೆಡ್ಕರ್ ಮುಸ್ಲಿಂ ಧರ್ಮದ ದೋಷಗಳ ಬಗ್ಗೆ ಮಾತನಾಡಿದ್ದನ್ನು ಮಾತ್ರ ವೈಭವಿಕರಿಸಿ ಅಂಬೆಡ್ಕರ್ ಅವರೇ ಮುಸ್ಲೀಮರ ವಿರುದ್ಧ ಇದ್ದರು ಎನ್ನುವ ಪ್ರಚಾರ ನಮ್ಮಲ್ಲಿ ನಡೆಯುತ್ತಿದೆ ಎಂದರು ಹಾಗೂ ಜಿನ್ನಾ ಅವರ ಬಗ್ಗೆ ಕಟುವಾಗಿ ಮಾತನಾಡಿದಕ್ಕೆ ಅಂಬೆಡ್ಕರ್ ಅವರನ್ನು ಮುಸ್ಲಿಂ ವಿರೋಧಿ ಎನ್ನಲಾಗುತ್ತಾ ಎಂದು ಪ್ರಶ್ನಿಸಿದರು. ಇದೇ ವೇಳೆ ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಕುವೆಂಪು ಮೊದಲಾದ ಹಿಂದೂ ಧರ್ಮದ ಅನೇಕ ಸುಧಾರಕರು ಹಿಂದೂ ಧರ್ಮದಲ್ಲಿ ಇದ್ದಂತಹ ಅನೇಕ ದೋಷಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ ಹಾಗಂತ ಅವರನ್ನೆಲ್ಲಾ ಹಿಂದು ವಿರೋಧಿ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳು ಧರ್ಮದ ನೆಲೆಯಲ್ಲಿ ಹಿಂದೂ ಯುವತಿಯರು ಕಾಲೇಜುಗಳಲ್ಲಿ ಸೀರೆ ಉಟ್ಟುಕೊಂಡೇ ಬರಬೇಕು ಎಂದು ಕಟ್ಟು ನಿಟ್ಟು ಮಾಡಿದ್ದಲ್ಲಿ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಒಪ್ಪದೇ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ. ಅಲ್ಲಿ ತೀರ್ಪು ನೀಡುವಾಗ ಧರ್ಮದ ನೆಲೆಯಲ್ಲಿ ಪರಿಗಣನೆಗೆ ತೆಗೆದುಕೊಂಡರೆ ಆಗ ಸಂವಿಧಾನವನ್ನು ಆಧಾರವಾಗಿ ಪರಿಗಣಿಸುವುದಿಲ್ಲ, ಬದಲಾಗಿ ಮನೂಧರ್ಮ (ಮನುಸ್ಮøತಿ)ವನ್ನು ಆದಾರವಾಗಿ ಪರಿಗಣಿಸಲಾಗುತ್ತದೆ, ಮನು ಧರ್ಮದಲ್ಲಿ ಹೆಣ್ಣನ್ನು ಯಾವ ಮಟ್ಟದಲ್ಲಿ ಇಟ್ಟಿದ್ದಾರೆ ಎಂಬೂದು ನಮಗೆಲ್ಲರಿಗೂ ಗೊತ್ತಿದೆ. ಇದು ಹಿಂದೂ ಮಹಿಳೆಯರು ಊಹಿಸದ ಅಪಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಾಗೂ ಇಂತಹದ್ದೊಂದು ಸಮಸ್ಯೆ ಮುಂದೆ ಘಟಿಸಬಾರದು ಎಂಬ ಮುಂದಾಲೋಚನೆಯಿಂದ ನ್ಯಾಯಾಲಯ ಹಿಜಾಬ್ ವಿಚಾರದಲ್ಲಿ ಈ ರೀತಿ ತೀರ್ಪು ನೀಡಿದೆ ಎಂದರು. ಬಿಜೆಪಿ ಓಟ್ ಬ್ಯಾಂಕಿಂಗ್ ಹಿಂದುಗಳಲ್ಲ ಮುಸ್ಲೀಮರು ಎಂದ ಅವರು, ಭಾರತದ ಮುಸ್ಲೀಮರು ಪಾಕಿಸ್ಥಾನ ಸೇರುತ್ತಿದ್ದರೆ ಬಿಜೆಪಿಗೆ ರಾಜ್ಯದಲ್ಲಿ 10 ಸೀಟು ಕೂಡಾ ಸಿಗುತ್ತಿರಲಿಲ್ಲ. ಉಡುಪಿ ಶಾಂತಿ ಸೌಹಾರ್ದತೆಗೆ ಹೆಸರಾದ ನಾಡು. ಇಲ್ಲಿ ನೆಮ್ಮದಿಯಾಗಿ ಬದುಕಬಹುದು ಎಂದು ನಾನು ಹೇಳುತ್ತಿದ್ದೆ. ಆದರೆ ಇತ್ತೀಚಿನ ವಿವಾದಗಳನ್ನು ನೋಡಿದರೆ ಉಡುಪಿ ಬಹಳ ಕಷ್ಟ ಎನ್ನುವ ಮಾತು ಕೇಳಿ ಬರುತ್ತಿದೆ. ದೇಶದಲ್ಲಿ ಮುಸ್ಲಿಂ ಧರ್ಮ ಸುಧಾರಣೆ ಆಗಿದ್ದು ಬಹಳ ಕಡಿಮೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ಸುಧಾರಣಾ ವಾದಿಗಳು ಹುಟ್ಟಿಕೊಂಡಷ್ಟು ಮುಸ್ಲಿಂ ಧರ್ಮದಲ್ಲಿ ಸುಧಾರಣಾ ವಾದಿಗಳು ಹುಟ್ಟಿಕೊಂಡಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!