ಡಾ.ತಲ್ಲೂರು ಅವರ ಕೃತಿಗೆ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ ಪ್ರದಾನ
ಉಡುಪಿ: ಉಡುಪಿಯ ಹಿರಿಯ ಹವ್ಯಾಸಿ ಲೇಖಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ `ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ‘ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020 ನೇ ಸಾಲಿನ ಪುಸ್ತಕ ಬಹುಮಾನ ಗೌರವಾರ್ಪಣೆ ಭಾನುವಾರ ಹೊಸಪೇಟೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಅವರು ಕೃತಿಕಾರ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ 25 ಸಾವಿರ ರೂ. ಗೌರವ ಧನ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್ ಅವರು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರ ನೇತೃತ್ವದಲ್ಲಿ ರಾಜ್ಯ ಜಾನಪದ ಅಕಾಡೆಮಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಪ್ರಶಸ್ತಿಗಳಿಂದ ಜಾನಪದ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿದೆ ಎಂದರು.ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಮಾತನಾಡಿ, ನಾಡಿನ ಜಾನಪದ ಕಲೆ ಬಗ್ಗೆ ಅಧ್ಯಯನ ನಡೆಸಿ ಪ್ರಕಟಿಸಲಾದ ಕೃತಿಗಳನ್ನು 4 ಮಂದಿ ವಿದ್ವಾಂಸರರು ಪ್ರತ್ಯೇಕವಾಗಿ ಪರಿಶೀಲಿಸಿ, ಈ ಪುಸ್ತಕ ಬಹುಮಾನಕ್ಕೆ ಆಯ್ಕೆ ನಡೆಸುತ್ತಾರೆ. ಜಾನಪದ ಕಲೆಯನ್ನು ದಾಖಲೀಕರಿಸುವ ಇಂತಹ ಕೃತಿಗಳು ಡಾ.ತಲ್ಲೂರು ಅವರಿಂದ ಇನ್ನಷ್ಟು ಹೊರಬರಲಿ ಎಂದರು. ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಡಾ.ಚನ್ನಪ್ಪ ಕಟ್ಟಿಯವರ `ಅಮೋಘ ಸಿದ್ಧ ‘ ಜನಪದ ಮಹಾಕಾವ್ಯ ಹಾಗೂ ಸುರೇಶ್ ನಾಗಲಮಡಿಕೆಯವರ `ಹಾಡು ಕಲಿಸಿದ ಹರ ‘ ಕೃತಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಅಕಾಡೆಮಿ ರಿಜಿಸ್ಟಾçರ್ ಎನ್.ನಮ್ರತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಹಾಗೂ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿಯ ನಾಟಿ ವೈದ್ಯೆ ಪದ್ಮಾವತಿ ಆಚಾರ್ಯ ಸೇರಿದಂತೆ 30 ಮಂದಿಗೆ 2021ನೇ ಸಾಲಿನ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಇಬ್ಬರು ಜಾನಪದ ಸಾಧಕರಿಗೆ ಜಾನಪದ ತಜ್ಞ ಪ್ರಶಸ್ರಿ ಪ್ರದಾನ ಮಾಡಲಾಯಿತು.ಡಾ.ತಲ್ಲೂರು ಅವರ ಈ `ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ‘ಕೃತಿ ಕರಾವಳಿಯ ಭೂತಾರಾದನೆ, ಕಾಡ್ಯನಾಟ್ಯ, ಯಕ್ಷಗಾನ ಅಲ್ಲದೆ ಕೇರಳದ ಕಥಕಳಿ, ಮೋಹಿನಿ ಅಟ್ಟಮ್ ಸೇರಿದಂತೆ ಸುಮಾರು 38 ಬಗೆಯ ಜಾನಪದ ಅನುಷ್ಠಾನ ಕಲೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇದೇ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ 2020 ನೇ ಸಾಲಿನ ಪುಸ್ತಕ ಸೊಗಸು ತೃತೀಯ ಬಹುಮಾನ ದೊರೆತಿರುವುದು ಇಲ್ಲಿ ಸ್ಮರಿಸಬಹುದಾಗಿದೆ.