ಮರ್ಣೆ: ಕೃಷಿ ಜಮೀನುಗಳಿಗೆ ಹಾನಿಯಾದರೂ ಸುಳ್ಳು ಹೇಳುವ ಗಣಿ ಇಲಾಖೆಯ ಅಧಿಕಾರಿಗಳು
ಉಡುಪಿ ಎ.12 (ಉಡುಪಿ ಟೈಮ್ಸ್ ವರದಿ): ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕಲ್ಲೆಚ್ಚಿಯಲ್ಲಿನ ಕಲ್ಲುಕೋರೆ ಗಣಿಗಾರಿಕೆಯಿಂದ ಸುತ್ತಮುತ್ತಲ 15-20 ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ಕಳೆದ 2 ವರ್ಷಗಳಿ0ದ ಸಮಸ್ಯೆಯಾಗುತ್ತಿದ್ದರೂ ಈ ಬಗ್ಗೆ ಸಂಬಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್ ವರ್ಮ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಲ್ಲೆಚ್ಚಿಯಲ್ಲಿನ ಕಲ್ಲುಕೋರೆ ಗಣಿಗಾರಿಕೆಯಿಂದ ಸುತ್ತಮುತ್ತಲ ಮನೆಗಳಿ ಹಾನಿಯಾಗುತ್ತಿದೆ. ಬಂಡೆಯನ್ನು ಪುಡಿಮಾಡಲು ಉಪಯೋಗಿಸುವ ಡೈನಮೈಟ್ ನ ಶಬ್ದದಿಂದ ಮನೆಗಳು ಬಿರುಕು ಬಿಟ್ಟಿದೆ. ಕೃಷಿ ಜಮೀನುಗಳಿಗೆ ಕಲ್ಲು ತುಂಡುಗಳು ಬಿದ್ದು ಕೃಷಿಗೆ ತೋಂದರೆಯಾಗುತ್ತಿದೆ. ಹೀಗಿರುವಾಗ ರೈತರು ಯಾವ ರೀತಿ ಕೃಷಿ ಮಾಡುವುದು ಎಂದು ಪ್ರಶ್ನಿಸಿದರು.
ಹಾಗೂ ಕೂಡಲೇ ಈ ಗಣಿಗಾರಿಕೆಯನ್ನು ನಿಲ್ಲಿಸಲಬೇಕು ಎಂದು ಆಗ್ರಹಿಸಿದರು. ಎರಡು ವರ್ಷದಿಂದ ಈ ಸಮಸ್ಯೆಯನ್ನು ಗ್ರಾಮಸ್ಥರು ಅನುಭವಿಸುತ್ತಿದ್ದರು. ಆದರೆ ಗ್ರಾಮದ ಜನರು ಇದನ್ನು ವಿರೋಧಿಸಲು ಹೆದರುತ್ತಿದ್ದರು. 8 ತಿಂಗಳ ಬಳಿಕ ಇದರ ಬಗ್ಗೆ ನ್ಯಾಯ ದೊರಕಿಸಿ ಕೊಡುವಂತೆ ಗ್ರಾಮಸ್ಥರು ನಮ್ಮ ಬಳಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರನ್ನು ಸೇರಿಸಿ ಎ.3 ರಂದು ಪ್ರತಿಭಟನೆ ನಡೆಸಿದ್ದೆವು. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಕಳೆದ ವರ್ಷ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಈಗ ಅವರು ಇಂಧನ ಸಚಿವರಾಗಿದ್ದಾರೆ. ಆದರೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಯಾಕೆ ಸಚಿವರು ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಹಾಗೂ ಇನ್ನಾದರು ಸಚಿವರು, ಜಿಲ್ಲಾಧಿಕಾರಿಯವರು, ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗಣಿಗಾರಿಕೆ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಲ್ಲು ಕೊರೆಯವರು ಅವರಿಗೆ ದುಡ್ಡು ಮಾಡಲು ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಕೆಲಸ ಮಾಡುತ್ತಾರೆ ಅವರಿಗೆ ಅವಕಾಶ ನೀಡಿದ್ದೇ ತಪ್ಪು ಎಂದ ಅವರು, ಗಣಿಗಾರಿಕೆಯಲ್ಲಿ ಸ್ಪೋಟದಿಂದಾಗಿ 300 ಮೀಟರ್ ವರೆಗೆ ಮನೆ ಬಿರುಕು ಬಿಟ್ಟಿದೆ ಆದರೆ ಅಧಿಕಾರಿಗಳು ಕೇವಲ 50 ಮೀಟರ್ ವರೆಗೆ ಮಾತ್ರ ಎನ್ನುತ್ತಿದ್ದಾರೆ. ಅಧಿಕಾರಿಗಳು ಯಾಕೆ ಸುಳ್ಳು ಹೇಳುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ತಿಳಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೊಡಿದರೆ ಗಣಿಗಾರಿಕೆಯವರ ಜೊತೆಗೆ ಇವರೂ ಶಾಮೀಲು ಆಗಿದ್ದೇನೋ ಎನ್ನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.
ಹಾಗೂ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಶೀಘ್ರವಾಗಿ ಕ್ರಮಕೈಗೊಂಡು ಸಂತ್ರಸ್ತ ನಿವಾಸಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್, ಹೆಬ್ರಿ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಕಳ ತಾಲೂಕು ಉಪಾಧ್ಯಕ್ಷ ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.