ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ರಾಜೀನಾಮೆ ಸಾಧ್ಯತೆ
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು ಮತ್ತು ಅವರನ್ನು ಬಂಧಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ತುರ್ತು ವರದಿ ರವಾನಿಸಲಾಗಿದೆ.ಬೆಳಗಾವಿಯ ಹಿಂಡಲಗಾ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕೋಟಿ ರೂ.ಗಳ 108 ರಸ್ತೆ ಕಾಮಗಾರಿಗೆ ನೇರವಾಗಿ ಈಶ್ವರಪ್ಪ ಅವರ ಅನುಮತಿ ಪಡೆದು ಚಾಲನೆ ನೀಡಿದ್ದೇನೆ ಎಂದು ಇತ್ತೀಚೆಗೆ ಸಂತೋಷ್ ಪಾಟೀಲ್ ಹೇಳಿದ್ದರು. ಅಂತಿಮವಾಗಿ ಆರ್‌ಡಿಪಿಆರ್ ಇಲಾಖೆ ಮತ್ತು ಈಶ್ವರಪ್ಪ ಅವರ ಸಂಗಡಿಗರು ನಾನು ವರ್ಕ್ ಆರ್ಡರ್ ಅಥವಾ ಬಿಲ್ ಪಡೆಯಲು ಸಹಾಯ ಮಾಡಲು ನಿರಾಕರಿಸಿದರು ಎಂದು ಆರೋಪಿಸಿದ್ದರು.
ಸಂತೋಷ್ ಗೆ ದೊಡ್ಡ ಮೊತ್ತದ ಸಾಲ ನೀಡಿದ ಹಣಕಾಸುದಾರರು ಸಾಲವನ್ನು ಹಿಂದಿರುಗಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದ ನಂತರ ಅವರು ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿದ್ದರು ಮತ್ತು ಬಿಲ್ ಹಾಗೂ ವರ್ಕ್ ಆರ್ಡರ್‌ಗಳನ್ನು ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಹೇಳಿದ್ದರು.
ಪ್ರಧಾನಿಗೆ ಬರೆದ ಪತ್ರದಲ್ಲಿ ಕೆಎಸ್ ಈಶ್ವರಪ್ಪ ಸಹಚರರು ಪೂರ್ಣಗೊಂಡ ಕಾಮಗಾರಿಗಳಿಗೆ ಕಮಿಷನ್ ನೀಡುವಂತೆ ತನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ತುಂಬಾ ಕಷ್ಟದಲ್ಲಿದ್ದೇನೆ ಮತ್ತು ನನಗೆ ಬಡ್ಡಿಗೆ ಸಾಲ ನೀಡಿದ ಸಾಲಗಾರರಿಂದ ಭಾರಿ ಒತ್ತಡವಿದೆ. ಬಿಲ್ ಪಾಸ್ ಮಾಡದಿದ್ದರೆ ನನಗೆ ಆತ್ಮಹತ್ಯೆ ಹೊರತುಪಡಿಸಿ ಬೇರೆ ಯಾವುದೇ ದಾರಿ ಇಲ್ಲ ಎಂದಿದ್ದರು.
ಪತಿಯ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಪಾಟೀಲ್ ಅವರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತೋಷ್ ಪಾಟೀಲ್ ಯಾರು ಅಂತ ನನಗೆ ಗೊತ್ತಿಲ್ಲ ಎಂದ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, `ಬಿಲ್ ಪಾವತಿಗೆ ಸಹಾಯ ಮಾಡುವಂತೆ ನನ್ನ ಪತಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದು, ಅವರಿಬ್ಬರ ಫೋಟೋಗಳು ನನ್ನ ಬಳಿ ಇವೆ. ಈಶ್ವರಪ್ಪನವರ ಸೂಚನೆ ಮೇರೆಗೆ ನನ್ನ ಪತಿ ಅಪಾರ ಹಣ ಹೂಡಿ ಎಲ್ಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಿದರು. ಈಗ ಪಾಟೀಲ್ ಯಾರೆಂದು ಗೊತ್ತಿಲ್ಲ ಎನ್ನುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಪಾಟೀಲ್ ಸಾವಿನಿಂದ ಆಘಾತಕ್ಕೊಳಗಾದ ಅವರ ಸಹೋದರ ಪ್ರಶಾಂತ್ ಪಾಟೀಲ್ ಅವರು, `ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ. `ಈಶ್ವರಪ್ಪ ಅವರೇ ಸಾವಿಗೆ ನೇರ ಹೊಣೆ. ಈಶ್ವರಪ್ಪ ಅವರ ಚಿತ್ರಹಿಂಸೆಯಿಂದ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಗೆ ಬೆದರಿಕೆ ಹಾಕಿದ್ದಲ್ಲದೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಸಂತೋಷ್, ಈಶ್ವರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ, ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ’’ ಎಂದು ಹೇಳಿದ್ದಾರೆ.