ಉಡುಪಿ: ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್’ಗೆ ಸಿಎಂ ಬೊಮ್ಮಯಿ ಸನ್ಮಾನ
ಉಡುಪಿ, ಎ.12(ಉಡುಪಿ ಟೈಮ್ಸ್ ವರದಿ): ಕೊರೊನಾ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ರಕ್ತದ ಕೊರತೆ ನೀಗಿಸಲು ನಿರಂತರ ಶ್ರಮಿಸಿ ಸಾವಿರಾರು ರೋಗಿಯ ಬಾಳಿಗೆ ಬೆಳಕಾದ ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರನ್ನು ಇಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ವತಿಯಿಂದ ಸನ್ಮಾನಿಸಲಾಯಿತು.
ಮಣಿಪಾಲದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಸತೀಶ್ ಸಾಲ್ಯಾನ್ ಮಣಿಪಾಲ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಎಸ್ ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇತರರು ಉಪಸ್ಥಿತ್ತರಿದ್ದರು.
ಮಾರ್ಚ್ 2020 ಕೊವಿಡ್ ಸಂಕಷ್ಟ ಸಂದರ್ಭದಲ್ಲಿ ನಿತ್ಯ ತುರ್ತು ರಕ್ತದ ಪೂರೈಕೆ ಹಾಗೂ ರಕ್ತದಾನ ಶಿಬಿರದ ಆಯೋಜಿಸುವ ಮೂಲಕ ಸತೀಶ್ ಸಾಲ್ಯಾನ್ ಅವರು ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಶ್ರಮಿಸಿದ್ದರು. ಇವರ ಸಾರಥ್ಯದಲ್ಲಿ ಸ್ಥಾಪನೆಗೊಂಡ ಅಭಯಹಸ್ತ ಚಾರಿಟೇಬಲ್ ಟ್ರಸ್ ಸಂಸ್ಥೆ ಇದೀಗ 2 ವರ್ಷ ಪೂರೈಸಿದ್ದು, ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ದ.ಕ ಜಿಲ್ಲೆಯಾದ್ಯಂತ 85 ರಕ್ತದಾನ ಶಿಬಿರನ್ನು ಆಯೋಜಿಸಿ 8,500 ಅಧಿಕ ಯೂನಿಟ್ ರಕ್ತದ ಸಂಗ್ರಹಿಸಿದೆ ಹಾಗೂ ಉಡುಪಿ ದ.ಕ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ 1270 ಕ್ಕೂ ಅಧಿಕ ನಿತ್ಯ ತುರ್ತು ರಕ್ತದಾನಿಗಳನ್ನು ಸಕಾಲದಲ್ಲಿ ಪೂರೈಸಿ ರೋಗಿಗಳ ಜೀವ ಉಳಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ.
ಈ ಸಂಸ್ಥೆ ಕೇವಲ 2 ವರ್ಷಗಳ ಅವಧಿಯಲ್ಲಿ ಒಟ್ಟು 9,700 ಯೂನಿಟ್ ರಕ್ತ ಸಂಗ್ರಹಿಸಿದ್ದು, ಸ್ವತಃ ರಕ್ತದಾನಿಯಾಗಿ ಸತೀಶ್ ಸಾಲ್ಯಾನ್ ಅವರು ಇದುವರೆಗೆ 46 ಬಾರಿ ರಕ್ತದಾನ ಮಾಡಿದ್ದಾರೆ. ಇವರ ಈ ಸಾಧನೆಗೆ ಕೆಎಂಸಿ ಮಣಿಪಾಲ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿ ಡಾ.ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿಗೆಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಕೊರೋನಾ ಸಂದರ್ಭದಲ್ಲಿ ಅತಿ ಹೆಚ್ಚು ರಕ್ತವನ್ನು ಸಂಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕೊರೊನ ಸಂದರ್ಭದಲ್ಲಿ ಸಲ್ಲಿಸಿದ ಸೇವೆಗಾಗಿ 20ಕ್ಕೂ ಅಧಿಕ ಸಂಸ್ಥೆಗಳಿಂದ ಸತೀಶ್ ಸಾಲ್ಯಾನ್ ರವರಿಗೆ ಕೊರೊನಾ ವಾರಿಯರ್ಸ್ ಎಂದು ಗುರುತಿಸಿ ಸನ್ಮಾನಿಸಿ ಗೌರವಿಸಲಾಗಿದೆ.