ಮಂಗಳೂರು: ಆ.4 ರಾತ್ರಿ 8ರಿಂದ ಗುರುವಾರ ರಾತ್ರಿ 8ರವರೆಗೆ ನಿಷೇಧಾಜ್ಞೆ

ಮಂಗಳೂರು: ಆಗಸ್ಟ್‌ 5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿರುವ ಕಾರಣದಿಂದ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 8ರಿಂದ ಗುರುವಾರ ರಾತ್ರಿ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

‘ಶ್ರೀರಾಮ ಮಂದಿರ ನಿರ್ಮಾಣ ಬೆಂಬಲಿಸಿ ಕೆಲವು ಸಂಘಟನೆಗಳು, ಸಾರ್ವಜನಿಕರು ಕಾರ್ಯಕ್ರಮ ಆಯೋಜಿಸಿವೆ. ಇದೇ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವ ಮಾಹಿತಿಯೂ ಲಭಿಸಿದೆ. ನಗರದ ವ್ಯಾಪ್ತಿಯಲ್ಲಿ ಮತೀಯ, ರಾಜಕೀಯ ಗಲಭೆಗಳನ್ನು, ಸಾರ್ವಜನಿಕ ಆಸ್ತಿ ಹಾಗೂ ಪ್ರಾಣ ಹಾನಿ ತಡೆಯಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144ರ ಅಡಿಯಲ್ಲಿ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಶ್‌ ಅವರು ಸೋಮವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಮುಷ್ಕರ, ರಸ್ತೆ ತಡೆ, ಮುತ್ತಿಗೆ, ಬೈಕ್‌ ರ‍್ಯಾಲಿ, ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!