ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ ಪ್ರಸಾದ್ ಬಲಿಪ ನಿಧನ
April 11, 2022
ಮಂಗಳೂರು: ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ ಪ್ರಸಾದ್ ಬಲಿಪ ಸೋಮವಾರ ನಿಧನರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅವರು ಅಸ್ವಸ್ಥರಾಗಿದ್ದರು. ಪ್ರಸಾದ್ ಬಲಿಪ ಅವರು ವಿಶಿಷ್ಟ ಕಂಚಿನ ಕಂಠದ ಭಾಗವತರು ಎಂದೇ ಜನಪ್ರಿಯರಾಗಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದರು. ಬಲಿಪ ಅವರು ಯಕ್ಷಗಾನ ರಂಗದ ತೆಂಕುತಿಟ್ಟಿನ ಅಗ್ರಗಣ್ಯ ಬಲಿಪ ಪರಂಪರೆಗೆ ಸೇರಿದ್ದು, ಖ್ಯಾತ ಭಾಗವತ ನಾರಾಯಣ ಬಲಿಪ ಅವರ ಪುತ್ರ.
ಮೃತರು ತಂದೆ, ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ಸಂತಾಪ: ತೆಂಕುತಿಟ್ಟು ಯಕ್ಷ ಪರಂಪರೆಯ ಪ್ರಸಿದ್ಧ ಭಾಗವತ ಬಲಿಪ ಪ್ರಸಾದ ಭಾಗವತರ ಅಕಾಲಿಕ ನಿಧನ ದಿಗ್ಬ್ರಮೆಯುಂಟು ಮಾಡಿದ್ದು, ಯಕ್ಷ ರಂಗಭೂಮಿಗೆ ಇದು ತುಂಬಲಾರದ ನಷ್ಟ. ತೆಂಕಿನ ಸರ್ವಶ್ರೇಷ್ಠ ಭಾಗವತರಾದ ಬಲಿಪ ನಾರಾಯಣ ಭಾಗವತರ ಪುತ್ರರಾಗಿ ಬಲಿಪ ಶೈಲಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಪ್ರಸಾದ ಭಾಗವತರ ಸಿರಿಕಂಠ ನಮಗಿನ್ನು ದೊರಕದು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.
ಕಟೀಲು ದುರ್ಗಾಪರಮೇಶ್ವರಿ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ ಭಾಗವತರು ಏರು ಶೃತಿಯ ಪರಂಪರೆಯ ಗಾಯನಕ್ಕೆ ಹೆಸರುವಾಸಿಯಾಗಿದ್ದರು. ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಪೌರಾಣಿಕ ಆಖ್ಯಾನಗಳ ಪ್ರಯೋಗಕ್ಕೆ ಹೊಸ ರೂಪ ನೀಡಿದ್ದರು. ಅವರ ಅಗಲಿಕೆಯಿಂದ ಯಕ್ಷರಂಗಕ್ಕೆ ಅಪಾರ ನಷ್ಟವುಂಟಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಯಕ್ಷಮಾತೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.