ಕುಂದಾಪುರ: ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಜೈಲು

ಉಡುಪಿ: ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲಿನ ದೋಷಾರೋಪವನ್ನುಗಳು ಸಾಭೀತಾದ ಹಿನ್ನೆಲೆ‌ ಆತನೇ ಅಪರಾಧಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ತೀರ್ಪು ನೀಡಿದ್ದಾರೆ.

ಪೋಕ್ಸೋ ಕಾಯ್ದೆಯಡಿಯಲ್ಲಿ 36 ವರ್ಷ ಪ್ರಾಯದ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 25 ಸಾವಿರ ದಂಡ ವಿಧಿಸಿದ್ದು ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ಘಟನೆ ಹಿನ್ನೆಲೆ: ಕುಂದಾಪುರ ಪೊಲೀಸ್ ಉಪವಿಭಾಗದ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಈ‌ ಪ್ರಕರಣ ಬೆಳಕಿಗೆ ಬಂದಿತ್ತು. 16 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಚಿಕ್ಕಪ್ಪ (ಸಂತ್ರಸ್ತೆ ತಾಯಿಯ ತಂಗಿ ಗಂಡ) ತನ್ನ ಮನೆಯಲ್ಲಿ ಆಕೆಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಆಕೆ 7 ತಿಂಗಳ ಗರ್ಭವತಿಯಾದ ಬಳಿಕ ಘಟನೆ ಕುಟುಂಬಿಕರ ಗಮನಕ್ಕೆ ಬಂದಿದ್ದು ವಿಚಾರಿಸಿದಾಗ ಆರೋಪಿ ಚಿಕ್ಕಪ್ಪ ಎಂಬುದಾಗಿ ತಿಳಿದಿತ್ತು. ಆರೋಪಿ ಕೂಲಿ‌ ಕೆಲಸ ಮಾಡಿಕೊಂಡಿದ್ದ.

ದೇವರು-ದೈವದ ಮೇಲೆ ಪ್ರಮಾಣ..! ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಕೈಕಾಲಿಗೆ ಬಿದ್ದು ಪ್ರಕರಣ ರಾಜಿ ಮೂಲಕ ಇತ್ಯರ್ಥ ಮಾಡಲು ಆರೋಪಿ ದುಂಬಾಲು ಬಿದ್ದಿದ್ದ. ಬಾಲಕಿಯ ಜೀವನ ನಿರ್ವಹಣೆಯ ಖರ್ಚು ವೆಚ್ಚ ತಾನೇ‌ ನೋಡಿಕೊಳ್ಳುವುದಾಗಿ ದೇವರು ದೈವದ ಮೇಲೆ ಆಣೆ ಪ್ರಮಾಣ ಮಾಡಿ ಪ್ರಕರಣ ಹಳ್ಳ ಹಿಡಿಸುವ ತಂತ್ರ ಮಾಡಿದ್ದ. ಆದರೆ ಸಂತ್ರಸ್ತ ಬಾಲಕಿ ಪೋಷಕರು ಇದ್ಯಾವುದನ್ನು ಒಪ್ಪದಿದ್ದು ಬಾಲಕಿ ತಾಯಿ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆಯೇ ಆರೋಪಿಯನ್ನು ಬಂಧಿಸಲಾಗಿದ್ದು ಬಳಿಕ ಆತ ಜಾಮೀನು ಪಡೆದು ಹೊರಗೆ ಬಂದಿದ್ದ.

ಉಲ್ಟಾ ಹೊಡೆದ ಬಾಲಕಿ..! ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ನ್ಯಾಯಾಲಯಕ್ಕೆ ದೋಷಾರೋಣಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಬಾಲಕಿ ಆರಂಭಿಕವಾಗಿ ನುಡಿದ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿರಲಿಲ್ಲ. ಪ್ರಾಸಿಕ್ಯೂಷನ್ ಅಡ್ಡ ವಿಚಾರಣೆ ವೇಳೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಆಕೆ ತಿಳಿಸಿದ್ದಳು. ಈತನ್ಮದ್ಯೆ ಡಿ.ಎನ್.ಎ ವರದಿ ಕೂಡ ನೆಗಟಿವ್ ಬಂದಿತ್ತು. ಆಕೆ ಮೇಲೆ ದೌರ್ಜನ್ಯ ನಡೆಯುವ ವೇಳೆ ಆಕೆ ಅಪ್ರಾಪ್ತಳು ಎಂಬುದನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಸಾಭೀತು ಮಾಡಿತ್ತು. ಇನ್ನು ಸಂತ್ರಸ್ತೆ ತಾಯಿ ಹಾಗೂ ತಂದೆ ಪ್ರಾಸಿಕ್ಯೂಷನ್ ಪೂರಕವಾಗಿ ಸಾಕ್ಷ್ಯ ನುಡಿದಿದ್ದರು. ನ್ಯಾಯಾಲಯದಲ್ಲಿ 22 ಸಾಕ್ಷಿಗಳ ಪೈಕಿ 16 ಮಂದಿ ವಿಚಾರಣೆ ಮಾಡಲಾಗಿತ್ತು. 

ಮೊದಲಿಗೆ ವಿಚಾರಣೆ ಕುಂದಾಪುರ ನ್ಯಾಯಾಲಯದಲ್ಲಿ ನಡೆದಿತ್ತು. ಪ್ರಾಥಮಿಕ ಹಂತದ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ನಡೆಸಿದ್ದು ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಮುಂದುವರಿದ ವಿಚಾರಣೆ ಹಾಗೂ ವಾದವನ್ನು ಮಂಡಿಸಿದ್ದರು

Leave a Reply

Your email address will not be published. Required fields are marked *

error: Content is protected !!