ಉಡುಪಿ: ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಸಿಎಂ ಬೊಮ್ಮಾಯಿ
ಉಡುಪಿ ಎ.11(ಉಡುಪಿ ಟೈಮ್ಸ್ ವರದಿ): ತತ್ವಜ್ಞಾನ ನಮ್ಮ ಬದುಕನ್ನು ಯಾವ ರೀತಿ ಬದುಕಬೇಕು ಎನ್ನುವುದನ್ನು ಹೇಳಿ ಕೊಡುತ್ತದೆ. ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಡಾ. ಬನ್ನಂಜೆ ಗೋವಿಂದ ಆಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಕೆಂದ್ರ ಗ್ರಂಥಾಲಯಗಳು ಇರುತ್ತಿದ್ದವು. ಬಹಳಷ್ಟು ಮಂದಿ ಅಲ್ಲಿಯೇ ಓದಿ ದೊಡ್ಡ ದೊಡ್ಡ ಪಂಡೀತರಾಗಿದ್ದಾರೆ. ಸಾಮಾನ್ಯ ಜನರು ಈ ಗ್ರಂಥಾಲಯ ಗಳಿಗೆ ಪತ್ರಿಕೆ ಓದಲೆಂದೇ ಬರುತ್ತಿದ್ದರು. ಈಗ ಎಲ್ಲಾ ಡಿಜಿಟಲ್ ಆಗಿದೆ. ಅದೇ ರೀತಿ ಇಂದು ಡಿಜಿಟಲ್ ಗ್ರಂಥಾಲಯ ಕೂಡಾ ಇಲ್ಲಿ ಅನೇಕ ವಿಷಯಗಳ ಕುರಿತ ಮಾಹಿತಿ ಪಡೆಯಬಹುದಾಗಿದೆ ಎಂದರು.
ಈ ಹಿಂದೆ ಬಹಳಷ್ಟು ಜನ ಬೆಳಿಗ್ಗಿನ ಚಹಾದ ಜೊತೆಗೆ ಪತ್ರಿಕೆ ಓದುತ್ತಿದ್ದರು. ಆದರೀಗ ಜಗತ್ತಿನ ಆಗುಹೋಗುಗಳನ್ನು ಮೊಬೈಲ್ ಮೂಲಕ ಹತ್ತೇ ನಿಮಿಷದಲ್ಲಿ ನೋಡಿಮುಗಿಸುತ್ತೇವೆ. ಈ ಎಲ್ಲಾ ಬದಲಾವಣೆ ಗಳ ನಡುವೆ ಮೂಲ ಭೂತವಾಗಿರುವಂತಹದ್ದು ತತ್ವಜ್ಞಾನ. ತತ್ವಜ್ಞಾನ ಶಾಶ್ವತವಾಗಿ ಮನುಷ್ಯನ ಚಿಂತನೆಯ ಮುಖಾಂತರ ಗುಣ ಧರ್ಮವನ್ನು ರೂಪಿಸುವಂತಹದ್ದು, ನ್ಯಾಯ, ನೀತಿ ಧರ್ಮ ಸರಿ ತಪ್ಪು, ಪಾಪ ಪುಣ್ಯ ಇದರ ಸುತ್ತ ಎಲ್ಲಾ ಅಡಗಿದೆ.
ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತತ್ವಜ್ಞಾನ ವಿಜ್ಞಾನಕ್ಕೆ ಸ್ಪೂರ್ತಿ ನೀಡುತ್ತದೆ. ವಿಜ್ಞಾನ ತತ್ವಜ್ಞಾನ ಕ್ಕೆ ಸ್ಪೂರ್ತಿ ನೀಡುತ್ತದೆ. ಹಾಗಾಗಿ ಎಲ್ಲಾ ವಿಜ್ಞಾನಿಗಳು ತತ್ವಜ್ಞಾನಿಗಳೇ. ಆದಿ ಕಾಲದಿಂದಲೂ ಪೂಜಿಸುತ್ತಾ ಬಂದಿರುವ ನೀರು, ಭೂಮಿ, ಆಕಾಶ, ಸೂರ್ಯ ಎಲ್ಲದರಲ್ಲೂ ವಿಜ್ಞಾನ ಬೆಳೆದು ಕೊಂಡು ಬಂದಿದೆ. ಸ್ವಲ್ಪ ಆಳವಾಗಿ ನೋಡಿದಾಗ ವಿಜ್ಞಾನದ ಹಿಂದೆ ತತ್ವಜ್ಞಾನ ಅಡಗಿದೆ ಎಂಬುದು ತಿಳಿಯುತ್ತದೆ ಎಂದರು.
ಕಾಲ ಬದಲಾವಣೆ ಆಗುತ್ತಿದೆ. ಆರಂಭದಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ ಮನುಷ್ಯನಿಗೆ ಬದುಕಬೇಕು ಎನ್ನುವುದಷ್ಟೇ ವಿಚಾರವಿತ್ತು. ಬಳಿಕ ಮನುಷ್ಯ ಸಾಮಾಜಿಕ ಜೀವಿಯಾದ ಮೇಲೆ ಜ್ಞಾನ ಬಂತು. ಆ ನಂತರ ವಿಜ್ಞಾನ ಬಂತು. ಕ್ರಮೇಣ ತಂತ್ರಜ್ಞಾನ ಬೆಳೆದಂತೆ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ ಬಂದಿತು. ತಂತ್ರಾಂಶದ ಬೆಳವಣಿಗೆಯಿಂದ ಪ್ರತಿಯೊಂದು ಬದಲಾಗಿ ಬದುಕಿನ ಆಯಾಮಗಳನ್ನು ಸಂಪೂರ್ಣವಾಗಿ ತಿರುಚಿಹಾಕಿದೆ. ತಂತ್ರಾಂಶ ಜ್ಞಾನ ಬಂದ ಮೇಲೆ ಇಂದು ಬದುಕು ಸಂಪೂರ್ಣವಾಗಿ ಬದಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್ ಹಾಗೂ ಇತರರು ಉಪಸ್ಥಿತರಿದ್ದರು.