ಉಡುಪಿ: ಸತ್ಯ,ಧರ್ಮ ಇರುವಲ್ಲಿ ನಾಗ ಸಾನ್ನಿಧ್ಯವಿರುತ್ತದೆ- ಡಾ|ಡಿ.ವೀರೇಂದ್ರ ಹೆಗ್ಗಡೆ
ಉಡುಪಿ ಎ.10: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೀಕೃತ ನಾಗ ಸನ್ನಿಧಾನ ಸಮರ್ಪಣೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವದ ಪ್ರಯುಕ್ತ ನಿನ್ನೆ ಸುಧರ್ಮ ಸಭೆ ನಡೆಸಲಾಯಿತು.
ಈ ವೇಳೆ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಧರ್ಮ ನಮ್ಮನ್ನು, ದೇಶವನ್ನು ರಕ್ಷಿಸುತ್ತದೆ. ಅದಕ್ಕಾಗಿ ನಾವು ಭಗವಂತನನ್ನು ಆಶ್ರಯಿಸಬೇಕು ಎಂದರು. ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಸತ್ಯ, ಧರ್ಮ ಇರುವಲ್ಲಿ ನಾಗಸಾನ್ನಿಧ್ಯ ಇರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪವಿತ್ರ ಭೂಮಿಯಾಗಿದ್ದು ಇಲ್ಲಿ ಬಹಳಷ್ಟು ನಾಗ ಸಾನ್ನಿಧ್ಯಗಳಿವೆ. ಇಲ್ಲಿನ ಮಣ್ಣು ಕೂಡ ನಾಗ ದೇವರದ್ದೇ ಎಂದು ಹೇಳಿದರು.
ಈ ವೇಳೆ ವಿವಿಧ ಗಣ್ಯರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಗ್ರಿ ದೇವಸ್ಥಾನದ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಆರ್ಚಕರಾದ ಅನಂತ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಬ್ರಹ್ಮಕಲಶೋತ್ಸವ, ನಾಗಮಂಡಲ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ, ಶ್ರೀಮಹಾಲಕ್ಷೀ ಕ್ಯಾಶ್ಯೂನ ಶ್ರೀಪತಿ ಭಟ್ ಮೂಡುಬಿದಿರೆ, ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ಮನೋಹರ ಶೆಟ್ಟಿ, ಉದ್ಯಮಿ ಗಣಪತಿ ಹೆಗ್ಡೆ, ದ.ಕ.-ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲಕೃಷ್ಣ ಜೋಯಿಸ, ವಾಸುದೇವ ಪೆರಂಪಳ್ಳಿ,ಆನಂದತೀರ್ಥ ಉಪಾಧ್ಯ ಉಪಸ್ಥಿತರಿದ್ದರು.