ಎಸ್ಡಿಪಿಐ ಕಾಂಗ್ರೆಸ್ಸಿನ ಪಾಪದ ಕೂಸು- ಅಧಿಕಾರವಿಲ್ಲದೆ ಸೊರಗಿದ ಸೊರಕೆ ಮುಖವಾಡ ಬಯಲಾಗಿದೆ: ಕುಯಿಲಾಡಿ
ಉಡುಪಿ: ಹಿಜಾಬ್ ವಿವಾದವನ್ನು ಹುಟ್ಟು ಹಾಕಿದವರು ಯಾರು, ವಿವಾದವನ್ನು ಬೆಂಬಲಿಸಿ ಪೋಷಿಸಿದವರು ಯಾರು ಹಾಗೂ ವಿದ್ಯಾರ್ಥಿನಿಯರ ದಾರಿ ತಪ್ಪಿಸಿದವರು ಯಾರು ಎಂಬ ಎಲ್ಲಾ ವಿಚಾರಗಳನ್ನು ಜಿಲ್ಲೆಯ ಬುದ್ಧಿವಂತ ಜನತೆ ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಆದರೆ ತನ್ನ ನೆಚ್ಚಿನ ಎಸ್ಡಿಪಿಐ ಜೊತೆ ಶಾಮೀಲಾಗಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡು ಇದೀಗ ಹಿಜಾಬ್ ವಿವಾದದ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡುತ್ತಾ, ಅಧಿಕಾರವಿಲ್ಲದೆ ಸೊರಗಿದ ಸೊರಕೆ ನೈಜ ಮುಖವಾಡ ಬಯಲಾಗಿದೆ. ಎಸ್ಡಿಪಿಐ ಕಾಂಗ್ರೆಸ್ಸಿನ ಪಾಪದ ಕೂಸು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ವೇಳೆ ಬಿಜೆಪಿ ಮತ್ತು ಎಸ್ಡಿಪಿಐ ಶಿಶುವಾಗಿ ಹಿಜಾಬ್ ವಿವಾದ ಹುಟ್ಟಿಕೊಂಡಿದೆ ಎಂಬ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ಹಳೇ ಚಾಳಿ ಎಲ್ಲೆ ಮೀರುತ್ತಿದೆ. ಮುಸ್ಲಿಂ ಓಟು ಕೈತಪ್ಪುವ ಭೀತಿಯಿಂದ ಕಾಂಗ್ರೆಸ್ಸಿಗರು ನೈಜ ಸಮಾಜಘಾತುಕರ ದೇಶ ದ್ರೋಹದ ಬಗ್ಗೆ ಮಾತನಾಡುವುದಿಲ್ಲ.
ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗೈದು ಒಂದೇ ವರ್ಗದ ಓಲೈಕೆಗೆ ಮುಡಿಪಾಗಿ ದುರಾಡಳಿತ ನಡೆಸಿದ ಪರಿಣಾಮವಾಗಿ ದೇಶದೆಲ್ಲೆಡೆ ಕಾಂಗ್ರೆಸ್ ನಿರ್ನಾಮದ ಹಾದಿಯಲ್ಲಿದೆ. ಪಂಚರಾಜ್ಯಗಳ ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ತೀವ್ರ ಹತಾಶ ಮನೋಭಾವ ಕಾಡುತ್ತಿದೆ. ತನ್ನ ಆಡಳಿತಾವಧಿಯಲ್ಲಿ ಕೇಂದ್ರ ಸರಕಾರ ರೂ.29 ನ್ನು ಭರಿಸಿರುವ ಅನ್ನ ಭಾಗ್ಯ ಯೋಜನೆಗೆ ರಾಜ್ಯದಿಂದ ಕೇವಲ ರೂ.3 ನ್ನು ಮಾತ್ರ ಭರಿಸಿ ಪುಕ್ಕಟೆ ಪ್ರಚಾರ ಪಡೆದು, ಜನತೆಯ ತೆರಿಗೆ ಹಣದಲ್ಲಿ ಒಂದೇ ವರ್ಗದ ಕಲ್ಯಾಣಕ್ಕೆ ಬಿಟ್ಟಿ ಭಾಗ್ಯಗಳನ್ನು ನೀಡಿ, ಖಜಾನೆಯನ್ನು ಬರಿದಾಗಿಸಿ ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದು ಸಿದ್ದರಾಮಯ್ಯ ಸಾಧನೆ.
ಜಾತ್ಯಾತೀತತೆಯ ಮುಖವಾಡ ಧರಿಸಿ ಹಿಂದೂ ಸಂತರನ್ನು ಅವಮಾನಿಸಿ, ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಸ್ವಕ್ಷೇತ್ರದ ಜನತೆಯಿಂದಲೇ ತಿರಸ್ಕೃತಗೊಂಡಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯನವರ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರು ವ್ಯಾಖ್ಯಾನಿಸಿರುವ ಮಾತು ವಾಸ್ತವಿಕವಾಗಿದೆ. ಯಾವುದೇ ವಿಷಯವಿಲ್ಲದೆ ಸದಾ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಮುಖಭಂಗ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಧೀಮಂತ ಕೇಂದ್ರ ಸಚಿವೆ ಹಾಗೂ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮಂಪರು ಪರೀಕ್ಷೆ ನಡೆಸಿ ಎಂದಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ಮೊದಲು ಮಂಪರು ಪರೀಕ್ಷೆ ನಡೆಸುವುದು ಸೂಕ್ತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.