| ಮಂಗಳೂರು: ಹಿರಿಯ ಲೇಖಕ ಡಾ. ಪ್ರಭಾಕರ್ ನೀರ್‌ಮಾರ್ಗ ಅವರ 27ನೇ ಕೃತಿ ಕಣ್ಮಣಿ ಕಾದಂಬರಿ ಕೃತಿಯ ಬಿಡುಗಡೆ ಕಾರ್ಯಕ್ರಮ ತುಳು ಪರಿಷತ್ ಆಶ್ರಯದಲ್ಲಿ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು.
ಕಣ್ಮಣಿ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಅವರು, ಪ್ರಭಾಕರ್ ನೀರ್ ಮಾರ್ಗ ಅವರೊಬ್ಬ ಸಾಹಿತ್ಯ ಕ್ಷೇತ್ರದ ಅನನ್ಯ ಪ್ರತಿಭಾವಂತ, ಅವರು ತನ್ನ ನಿರಂತರ ಬರಹದ ಮೂಲಕ ತುಳುನಾಡಿನ ಬದುಕು ಸಂಸ್ಕೃತಿಯನ್ನು ದಾಖಲೀಕರಣ ಮಾಡುವಂತಹ ಮಹಾತ್ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ, ಕಣ್ಮಣಿ ಕಾದಂಬರಿಯು ಹಳ್ಳಿಯ ರಾಜಕೀಯ, ಸಾಮಾಜಿಕ ಬದುಕನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು.
ಕೃತಿಯ ಪರಿಚಯ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಂಶೋಧನಾ ಸಹಾಯಕ ಚೇತನ್ ಮುಂಡಾಜೆ ಅವರು ಮಾತನಾಡಿ, ಪ್ರಭಾಕರ್ ನೀರ್ ಮಾರ್ಗ ಅವರ ಎಲ್ಲಾ ಕೃತಿಗಳು ಸಾಮಾಜಿಕ ಬದುಕಿನ ಪಲ್ಲಟಗಳನ್ನು ಹಾಗೂ ಸಂಸ್ಕೃತಿಯನ್ನು ಅನಾವರಣ ಮಾಡುತ್ತದೆ. ಅವರ ಕೃತಿಗಳ ಮೂಲಕ ತುಳುನಾಡಿನ ಪರಂಪರೆ, ಇತಿಹಾಸ, ಸಾಮಾಜಿಕ ಕಥನವನ್ನು ನೋಡಬಹುದಾಗಿದೆ ಎಂದು ಹೇಳಿದರು. ಸಮಾರಂಭಧ ಅಧ್ಯಕ್ಷತೆ ವಹಿಸಿದ್ದ ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ ಅವರು ಮಾತನಾಡಿ, ನಿರಂತರವಾಗಿ ಅವಿರತವಾಗಿ ಬರೆಯುತ್ತಿರುವ ಪ್ರಭಾಕರ ನೀರ್‌ಮಾರ್ಗ ಅವರ ಬರೆಯುವ ಕಾಯಕ ಸಾಹಿತ್ಯಿಕ ಕ್ಷೇತ್ರದ ಅಪೂರ್ವ ಸಾಧನೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿ ಭಾಗಹಿಸಿದ ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವಾ ಅವರು ಮಾತನಾಡಿ, ಆಡಳಿತಗಾರನಾಗಿ, ಶಿಕ್ಷಕನಾಗಿ ಹಾಗೂ ಸಾಹಿತಿಯಾಗಿ ಪ್ರಭಾಕರ್ ಅವರದ್ದು ಸಮನ್ವಯದ ಶಿಶ್ತಿನ ಬದುಕು ಎಂದು ಬಣ್ಣಿಸಿದರು. ಇನ್ನೋರ್ವ ಮುಖ್ಯ ಅತಿಥಿ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ ಅವರು ಮಾತನಾಡಿ, ಪ್ರಭಾಕರ್ ಅವರ ಸಾಹಿತ್ಯ ಕ್ಷೇತ್ರದ ಸಾಧನೆ, ಅವರ ಬರವಣಿಗೆಯ ಬದ್ಧತೆ ಅನನ್ಯವಾದದು ಎಂದು ಹೇಳಿದರು.
ಸಮಾರಂಭದಲ್ಲಿ ಲೇಖಕ ಪ್ರಭಾಕರ್ ನೀರ್‌ಮಾರ್ಗ ಅವರನ್ನು ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ ಅವರು ಸನ್ಮಾನಿಸಿದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರ್ವಹಿಸಿದರು, ಕೋಶಾಧಿಕಾರಿ ಶುಭೋದಯ ಆಳ್ವಾ ವಂದಿಸಿದರು. | |