| ಉಡುಪಿ ಎ.10 (ಉಡುಪಿ ಟೈಮ್ಸ್ ವರದಿ): ಬಲೈಪಾದೆಯ ಬಳಿಯ ಮಳೆ ನೀರು ಹರಿಯುವ ಚರಂಡಿಯಲ್ಲಿ ತ್ಯಾಜ್ಯ ಹಾಗೂ ಕಲುಷಿತ ನೀರಿನಿಂದ ಪರಿಸರದ ನಿವಾಸಿಗಳಿಗೆ ಡೆಂಗ್ಯೂ ಸೇರಿದಂತೆ ಇತ್ಯಾದಿ ಕಾಯಿಲೆ ಹರಡಿ ಅಪಾಯ ತಂದೊಡ್ಡುತ್ತಿದ್ದ ತ್ಯಾಜ್ಯವನ್ನು ಕಡೆಕಾರು ಪಂಚಾಯತ್ ವತಿಯಿಂದ ತೆರವುಗೊಳಿಸಲಾಗಿದೆ.
ಕುತ್ಪಾಡಿ ಗರಡಿ ರಸ್ತೆಯ ಬಲಾಯಿಪಾದೆ ಚರಂಡಿಗೆ ಕಲುಷಿತ ನೀರು, ಕೆಲವು ವಸತಿ ಸಂಕೀರ್ಣಗಳ ತ್ಯಾಜ್ಯ ನೀರನ್ನು ಅಕ್ರಮವಾಗಿ ಸಂಪರ್ಕ ನೀಡಿದ ಪರಿಣಾಮವಾಗಿ ಈ ಪರಿಸರದಲ್ಲಿ ಹಲವಾರು ತಿಂಗಳಿಂದ ಅನೇಕ ಮಂದಿಗೆ ಡೆಂಗ್ಯೂ ಸೋಂಕು ತಗುಲಿ ಜೀವಕ್ಕೆ ಅಪಾಯ ಎದುರಾಗಿತ್ತು.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಕಡೆಕಾರು ಗ್ರಾಮ ಪಂಚಾಯತ್ ನ ಗಮನಕ್ಕೆ ತಂದಿದ್ದರು. ಬಳಿಕ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸದಸ್ಯರು ಮತ್ತು ಸಿಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿ ತೋಡಿನಲ್ಲಿ ಶೇಖರವಾಗಿದ್ದ ತಿಪ್ಪೆ ಕಸವನ್ನು ತೆರವುಗೊಳಿಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದೆ ವಾಸ್ತವ್ಯ ಕಟ್ಟಡದ ಕೊಳಚೆ ನೀರನ್ನು ಸಾರ್ವಜನಿಕ ತೋಡಿಗೆ ಬಿಡಬಾರದು ಎಂದು ಕಟ್ಟಡದ ಮಾಲಕರಿಗೆ ಎಚ್ಚರಿಕೆ ನೀಡಿದರು. ಇದೀಗ ಸ್ಥಳೀಯ ನಿವಾಸಿಗಳ ಸಮಸ್ಯೆಗೆ ಸಹಕರಿಸಿದ ಪಂಚಾಯತ್ ಸದಸ್ಯ ಪ್ರಶಾoತ್ ಸಾಲಿಯಾನ್, ವೀಣಾ ಪ್ರಕಾಶ್ ಹಾಗೂ ಪಂಚಾಯತ್ ನ ಸಿಬಂದಿ ವರ್ಗದವರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ. | |