ಉಡುಪಿ: ಕ್ರೈಸ್ತ ಬಾಂಧವರಿಂದ ಶ್ರದ್ಧಾಭಕ್ತಿಯಿಂದ ಪಾಮ್‌ ಸಂಡೆ ಆಚರಣೆ

ಉಡುಪಿ: ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್‌ ಸಂಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಬಾರ್ಕೂರಿನ ಸಂತ ಪೀಟರ್‌ ಚರ್ಚಿನಲ್ಲಿ  ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿದರು. ಈ ವೇಳೆ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಫಿಲಿಪ್‌ ನೆರಿ ಆರಾನ್ಹಾ, ಅತಿಥಿ ಧರ್ಮಗುರು ವಂ| ಚಾರ್ಲ್ಸ್‌ ಸಲ್ಡಾನಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದುಕೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಚರ್ಚ್‌ಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು.

ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಂ. ವಲೇರಿಯನ್‌ ಮೆಂಡೋನ್ಸಾ ಪಾಮ್‌ ಸಂಡೆಯ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು. ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಪ್ರಧಾನ ಧರ್ಮಗುರು ವಂ ಡೆನಿಸ್‌ ಡೆಸಾ, ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ವಂ|ಚಾರ್ಲ್ಸ್‌ ಮಿನೇಜಸ್‌, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ|ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕಾದಲ್ಲಿ ವಂ|ಆಲ್ಬನ್‌ ಡಿಸೋಜಾ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು

ಪಾಮ್‌ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್‌ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಅತೀ ಮಹತ್ವದಾಗಿದ್ದು, ಗುರುವಾರ ಯೇಸುಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದ್ದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್‌ ಫ್ರೈಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್‌ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್‌ ಹಬ್ಬ ಆಚರಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!