ಬೆಲೆ ಏರಿಕೆ ಮರೆಮಾಚಲು ಸ್ವಾಮಿಗಳನ್ನು ಕರೆತಂದು ಪ್ರಚೋದನಾತ್ಮಕ ಹೇಳಿಕೆ ಕೊಡಿಸಲಾಗುತ್ತಿದೆ- ಶಾಸಕ ಶ್ರೀನಿವಾಸ್
ತುಮಕೂರು: ಕೆಲವು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಪ್ರಚೋದನಕಾರಿ ಹೇಳಿಕೆ ಕೊಡಿಸಲಾಗುತ್ತಿದೆ. ಇಂಥ ಸ್ವಾಮಿಗಳಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಶನಿವಾರ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಅನಗತ್ಯ. ಆದರೆ, ಬೆಲೆ ಏರಿಕೆ ವಿಚಾರ ಮರೆಮಾಚಲು ಇಂತಹ ಭಾವನಾತ್ಮಕ ವಿಚಾರಗಳನ್ನು ತಂದು ಜನರ ದಿಕ್ಕು ತಪ್ಪಿಸ ಲಾಗುತ್ತಿದೆ. ಕೆಲ ಸ್ವಾಮಿಗಳನ್ನು ಕರೆತಂದು ಪ್ರಚೋದನಾತ್ಮಕ ಹೇಳಿಕೆ ಕೊಡಿಸಲಾಗುತ್ತಿದೆ’ ಎಂದು ಟೀಕಿಸಿದರು.
‘ಧಾರ್ಮಿಕ ಕೇಂದ್ರಗಳಿಗೆ ಮುಸ್ಲಿಂ ಚಾಲಕರನ್ನು ಕರೆದುಕೊಂಡು ಹೋಗಬೇಡಿ ಎಂದು ಯಾರೊ ಒಬ್ಬರು ಸ್ವಾಮೀಜಿ ಹೇಳಿದ್ದಾರೆ. ಈ ಸ್ವಾಮಿ ಬಂದು ಚಾಲಕನ ಕೆಲಸ ಮಾಡುತ್ತಾರಾ? ಕಾವಿ ಬಟ್ಟೆ ತೊಟ್ಟವರು ಅವರ ಕೆಲಸ ಮಾಡಬೇಕು. ಇಲ್ಲವಾದರೆ ಕಾವಿ ಬಿಚ್ಚಿ, ಖಾಕಿ ಹಾಕಿಕೊಳ್ಳಲಿ. ಇಂಥ ಸ್ವಾಮೀಜಿಗಳಿಂದ ನಮಗೆ ಏನು ಸಂದೇಶ ಸಿಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.