ಸುರತ್ಕಲ್: ಬೀಚ್ ನಲ್ಲಿ ಆಟವಾಡುತ್ತಿದ್ದ ಒಂದೇ ಕುಟುಂಬದ ಇಬ್ಬರು ನೀರು ಪಾಲು
ಸುರತ್ಕಲ್, ಎ.10: ಸುರತ್ಕಲ್ ಎನ್ಐಟಿಕೆ ಬೀಚ್ ನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಒಂದೇ ಕುಟುಂಬದ ಇಬ್ಬರು ನೀರುಪಾಲಾದ ಘಟನೆ ಇಂದು ನಡೆದಿದೆ.
ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ (21) ಮತ್ತು ತ್ರಿಶಾ (13) ಮೃತಪಟ್ಟವರು. ಘಟನೆಯಲ್ಲಿ ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿಯ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆಗೆ ಎನ್ಐಟಿಕೆ ಬೀಚ್ ಗೆ ಆಗಮಿಸಿದ್ದರು.
ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಈ ಮೂವರು ಅಲೆಗಳ ಅಬ್ಬರಕ್ಕೆ ಸಿಲುಕಿದ್ದು, ತಕ್ಷಣ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ನೀರಿನಲ್ಲಿ ಮುಳುಗಿ ಅಸ್ವಸ್ಥ ಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.