ಸಂಪರ್ಕ ಭಾಷೆಯಾಗಿ ಹಿಂದಿ ಹೇರಿಕೆ- ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಸಂಘ ಖಂಡನೆ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಪರ್ಕ ಭಾಷೆಯಾಗಿ ಹಿಂದಿ ಬಳಸಬೇಕು ಎಂದು ಹೇಳುವ ಮೂಲಕ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿರುವುದು ಖಂಡನೀಯ’ ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಸಂಘದ ಅಧ್ಯಕ್ಷ ರಫಾಯಲ್ ರಾಜ್ ದೂರಿದ್ದಾರೆ.
‘ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ’ಯ ಪರಿಕಲ್ಪನೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯಸೂಚಿ. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಯಾ ಪ್ರದೇಶದ ಭಾಷೆಗಳನ್ನೇ ಸಂಪರ್ಕ ಭಾಷೆಯಾಗಿ ಮುಂದುವರಿಸಲು ಕಾನೂನು ತರುವ ಅಗತ್ಯವಿದೆ. ಈ ಮೂಲಕ ಪ್ರಾದೇಶಿಕ ಭಾಷೆಗಳನ್ನು ಉಳಿಸುವುದು ಅನಿವಾರ್ಯ. ಅಮಿತ್ ಶಾ ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಹಿಂದಿ ಹೇರಿಕೆ ಹೇಳಿಕೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಖಂಡನಾ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.