ಬಿಜೆಪಿ ಮತ್ತು ಎಸ್ ಡಿಪಿಐ ಪ್ರೀತಿಯ ಶಿಶುವಾಗಿ ಹಿಜಾಬ್ ವಿವಾದ ಹುಟ್ಟಿಕೊಂಡಿದೆ- ವಿನಯ್ ಕುಮಾರ್ ಸೊರಕೆ
ಉಡುಪಿ, ಎ.9: ರಾಜ್ಯ ಮತ್ತು ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, ಕಾಪುವಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಸ್ ಡಿಪಿಐ ಮಾಡಿದ ಪ್ರೀತಿಯ ಶಿಶುವಾಗಿ ಹಿಜಾಬ್ ವಿವಾದ ಹುಟ್ಟಿಕೊಂಡಿದೆ. ಇಂದು ಬಿಜೆಪಿ ವಿದ್ಯಾರ್ಥಿಗಳ ದಾರಿ ತಪ್ಪಿಸುವಂತಹ ಕೆಲಸ ಮಾಡಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ತನಿಖೆ ಮಾಡದೆ ಸುಳ್ಳು ಕತೆ ಕಟ್ಟುವ ಕೆಲಸಕ್ಕೆ ಬಿಜೆಪಿಯವರು ಹೋಗುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ತಮ್ಮ ಹಾಳೆಯ ಚಾಲಿ ಆರಂಭಿಸಿ, ವಿವಾದಗಳನ್ನು ಸೃಷ್ಠಿಸಿ ಲಾಭ ಪಡೆಯುವ ಹುನ್ನಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರ ರಾಜ ಕಾರಣಕ್ಕೆ ತೀಲಾಂಜಲಿ ಇಡುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ ಎಂದರು.
ಇನ್ನು ಚುನಾವಣೆಗೆ ಒಂದು ವರ್ಷ ಇದೆ ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಆದ್ದರಿಂದ ಪರೇಶ್ ಮೇಸ್ತಾ ಸಾವಿನ ತನಿಖೆಯನ್ನು ಕೂಡಲೇ ಮಾಡಿ ಸಾವಿನ ಸತ್ಯವನ್ನು ಹೊರತರಬೇಕು ಇಲ್ಲವಾದಲ್ಲಿ ಈ ಸಾವಿಗೆ ಬಿಜೆಪಿಯೇ ಕಾರಣ ಎಂದು ಜನರ ಬಳಿ ಹೋಗಿ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯರು ಮಂಜುನಾಥ ಭಂಡಾರಿ ಅವರು ಮಾತನಾಡಿ, ಕಳೆದ 4 ವರ್ಷಗಳಲ್ಲಿ ತೆರಿಗೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ಡೀಸೆಲ್ ಮೇಲೆ 120 ರಷ್ಟು ತೆರಿಗೆ ಹಾಗೂ ಪೆಟ್ರೋಲ್ ಮೇಲೆ 330 ರಷ್ಟು ತೆರಿಗೆ ಏರಿಕೆಯಾಗಿದೆ ಎಂದು ಬೆಲೆ ಏರಿಕೆಯನ್ನು ಖಂಡಿಸಿದರು. ಪ್ರತಿಭಟನಾ ಸಭೆಗೂ ಮುನ್ನ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ರಘುಪತಿ ಭಟ್ ಹಾಗೂ ರಾಜ್ಯ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಅಮೃತ್ ಶೆಣೈ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್, ರಾಜು ಪೂಜಾರಿ, ಇಸ್ಮಾಯಿಲ್ ಆತ್ರಾಡಿ, ಶಬ್ಬೀರ್ ಉಡುಪಿ, ನಾಸೀರ್, ನವೀನ್ ಡಿಸೋಜ, ಮಂಜುನಾಥ್ ಪೂಜಾರಿ, ಸದಾಶಿವ ದೇವಾಡಿಗ, ಮದನ್ ಕುಮಾರ್, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸಂತೋಷ್ ಕುಲಾಲ್, ಪ್ರಶಾಂತ್ ಜತ್ತನ್ನ, ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಅಜ್ಜರಕಾಡಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.