ಬ್ರಹ್ಮಾವರ: ತಂದೆ-ತಾಯಿಗೆ ಕೊಲೆ ಬೆದರಿಕೆ ಒಡ್ಡಿದ ಮಗನ ವಿರುದ್ಧ ದೂರು

ಬ್ರಹ್ಮಾವರ ಎ.9 (ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ತಾಯಿಯ ಕರಿಮಣಿ ಸರವನ್ನು ತುಂಡರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರದ ಹಂದಾಡಿಯ ಜಯರಾಮ ಶೆಟ್ಟಿ ಅವರು ತಮ್ಮ ಮಗ ರಜತ್ ಶೆಟ್ಟಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 

ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ಪೂರ್ಣಿಮಾ ಶೆಟ್ಟಿ ಅವರು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು, ಮಗನೊಂದಿಗೆ ಬ್ರಹ್ಮಾವರದ ಹಂದಾಡಿಯಲ್ಲಿ ವಾಸವಾಗಿದ್ದರು. ತಂದೆ ತಾಯಿ ಮಗನಿಗೆ ಕೆಲಸ ಹುಡುಕಿಕೊಳ್ಳುವಂತೆ ತಿಳಿ ಹೇಳಿದ್ದರೂ ಮಗ ಕೆಲಸ ಮಾಡದೇ ಮನೆಯಲ್ಲೇ ಇರುತ್ತಿದ್ದ.

ಈ ನಡುವೆ ನಿನ್ನೆ ಸಂಜೆ ವೇಳೆ ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ಪೂರ್ಣಿಮಾ ಶೆಟ್ಟಿ ಅವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಮಗ ರಜತ್ ಶೆಟ್ಟಿ ಏಕಾಏಕಿ ಇಬ್ಬರಿಗೂ ಅವಾಚ್ಯವಾಗಿ ಬೈದು, ತಾಯಿಯ ಕರಿಮಣಿ ತಾಳಿಯನ್ನು ಹಿಡಿದೆಳೆದು ತುಂಡು ಮಾಡಿ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ತಂದೆ ತಡೆಯಲು ಬಂದಾಗ ಕತ್ತಿ ಹಿಡಿದು ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೂ ಈ ಹಿಂದೆಯೂ ಮಗ ಇದೇ ರೀತಿ ಮಾಡಿದ್ದು, ಮಗನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಯರಾಮ ಶೆಟ್ಟಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!