| ಬೆಂಗಳೂರು, ಎ.8: ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ನೋಂದಣಿ ಶುಲ್ಕ ಕಡಿತದ ಅವಧಿಯನ್ನು ಇನ್ನೂ ಮೂರು ತಿಂಗಳ ವರೆಗೆ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಸ್ತಿ ನೋಂದಣಿ ಶುಲ್ಕದ ಮಾರ್ಗಸೂಚಿ ದರಲ್ಲಿ ಶೇ.10ರಷ್ಟು ಕಡಿತಗೊಳಿಸಿದ್ದು, ಪ್ರಸ್ತುತ ಘೋಷಣೆ ಮಾಡಿರುವ ಅವಧಿಯು ಮಾ.31ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಜನರ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಬೇಕೆಂಬ ಚಿಂತನೆಯಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.
‘ಕಂದಾಯ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಇಲಾಖೆಯನ್ನು ಜನೋಪಯೋಗಿ ಮಾಡಬೇಕೆಂಬುದು ಸರಕಾರದ ಉದ್ದೇಶ. ಇದಕ್ಕಾಗಿಯೇ ಆಸ್ತಿ ನೋಂದಣಿ ಶುಲ್ಕದ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಿದ್ದೆವು. ಈಗ ಇಲಾಖೆಯು ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂದಾಯ ಇಲಾಖೆ ಗುರಿ ಮೀರಿದ ಸಾಧನೆ ಮಾಡಿದೆ. ಹಿಂದಿನ ವರ್ಷ ನಾವು 1,200 ಕೋಟಿ ರೂ.ಆದಾಯದ ಗುರಿ ನೀಡಿದ್ದೆವು. ಆದರೆ, ನಮ್ಮ ಅಧಿಕಾರಿಗಳು 1,300 ಕೋಟಿ ರೂ.ಆದಾಯ ಸಂಗ್ರಹಿಸಿದ್ದಾರೆ. ಇದು ಗುರಿ ಮೀರಿದ ಸಾಧನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಟಿ-ಬಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿಗೆ ಚೀನಾ-ಅಮೆರಿಕ ಸ್ಪರ್ಧೆಯೇ ಹೊರತು ಬೇರೆ ನಗರಗಳಲ್ಲ. ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುತ್ತದೆ. ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಐಟಿಬಿಟಿ, ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ಸ್ಪರ್ಧೆಯಿದ್ದರೆ ಅಮೆರಿಕ, ಚೀನಾ ಹೊರತು, ಹೈದರಾಬಾದ್-ಚೆನ್ನೈ ನಗರಗಳಲ್ಲ. ‘ದೇಶದ ಬೇರೆ ಬೇರೆ ಭಾಗಗಳಲ್ಲಿ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಾರೆ. ಆದರೆ ನಮ್ಮಲ್ಲಿ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಇರುವುದರಿಂದ ಇಲ್ಲಿ ಮುಕ್ತವಾಗಿ ಬರುತ್ತಾರೆ. ಬೇರೆ ಕಡೆ ಭಾಷೆ ಸಮಸ್ಯೆಯಿದ್ದರೆ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರಕಾರ ಬದ್ಧವಾಗಿದೆ’ ಎಂದು ಹೇಳಿದರು. ‘ಹಿಂದಿನ ಯಾವ ಸರಕಾರಗಳು ನಗರ ಅಭಿವೃದ್ಧಿಗೆ ನಾವು ಕೊಟ್ಟಷ್ಟು ಕೊಡುಗೆಗಳನ್ನು ಕೊಟ್ಟಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸರಕಾರಗಳು ನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದವು. ಆದರೆ, ನಮ್ಮ ಸರಕಾರ ರಸ್ತೆ, ಚರಂಡಿ, ಮೇಲ್ಸೇತುವೆ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದೆ’ ಎಂದರು. | |
ಈಗಾಗಲೇ 100% ಸ್ಟ್ಯಾಂಪ್ ಶುಲ್ಕ ಕಳೆದ 8 ದಿನದಿಂದ ಪಾವತಿಸಿ ದ ಸ್ತಾವೇಜು ನೋಂದನಿ ಆಗಿದೆ. ಆದೇಶ ಮಾಡೋದು ಇದ್ದಲ್ಲಿ ಕೂಡಲೇ ಮಾಡಲು ವಿನಂತಿ.