ಬೆಂಗಳೂರು: 7 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್- ತೀವ್ರ ಶೋಧ
ಬೆಂಗಳೂರು: ರಾಜ್ಯಾದ್ಯಂತ ಧರ್ಮ ಸಂಘರ್ಷಣೆ ನಡುವೆಯೇ ರಾಜಧಾನಿ ಬೆಂಗಳೂರು ನಾಗರಿಕರು ಬೆಚ್ಚಿಬೀಳುವ ಆಘಾತಕಾರಿ ಮಾಹಿತಿ ಶುಕ್ರವಾರ ಹೊರಬಿದ್ದಿದೆ. ಬೆಂಗಳೂರಿನ (Bengaluru) ಏಳು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ.
ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ಶಾಲೆಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇಮೇಲ್ (Email) ಬಂದಿದ್ದು, ಪೊಲೀಸರು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದಾರೆ. ಇಮೇಲ್ ಆಧರಿಸಿ ಖಾಸಗಿ ಶಾಲೆಗಳಿಗೆ ಬಾಂಬ್ ಸ್ಕ್ವಾಡ್, ಶ್ವಾನ ದಳ ಮೂಲಕ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಶಾಲೆಗಳಿಂದ (Schools) ಸಿಬ್ಬಂದಿಗಳನ್ನು, ಬೇಸಿಗೆ ಶಿಬಿರ, ಪರೀಕ್ಷೆ ಬರೆಯುವುದರಲ್ಲಿ ನಿರತರಾಗಿದ್ದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದೆ ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಇದುವರೆಗೆ ಶಾಲೆಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಮಾಹಿತಿ, ಸುಳಿವು ಸಿಕ್ಕಿಲ್ಲ, ಹಾಗೆಂದು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದಿದ್ದಾರೆ.
ಯಾವ್ಯಾವ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ:
ಮಹದೇವಪುರ ಸಮೀಪದ ಹೂಡಿಯಲ್ಲಿರುವ ಗೋಪಾಲನ್ ಇಂಟರ್‌ನ್ಯಾಶನಲ್ ಸ್ಕೂಲ್, ವರ್ತೂರಿನ ಸೂಲಿಕುಂಟೆಯ ದೆಹಲಿ ಪಬ್ಲಿಕ್ ಸ್ಕೂಲ್, ಹೆಣ್ಣೂರಿನ ಸೇಂಟ್ ವಿನ್ಸೆಂಟ್ ಪಲ್ಲೊಟ್ಟಿ ಶಾಲೆ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗೋವಿಂದಪುರದ ನ್ಯೂ ಇಂಡಿಯನ್ ಪಬ್ಲಿಕ್ ಸ್ಕೂಲ್‌ಗೆ ಬೆದರಿಕೆ ಇಮೇಲ್‌ಗಳು ಬಂದಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಸ್ಕೂರಿನ ಎಬಿನೇಜರ್ ಇಂಟರ್‌ನ್ಯಾಶನಲ್ ಸ್ಕೂಲ್, ಬೇಗೂರು-ಕೊಪ್ಪ ರಸ್ತೆಯಲ್ಲಿರುವ ರೆಡ್‌ಬ್ರಿಡ್ಜ್ ಇಂಟರ್‌ನ್ಯಾಶನಲ್ ಅಕಾಡೆಮಿ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪ ರಸ್ತೆಯಲ್ಲಿರುವ ಕ್ಯಾಂಡರ್ ಇಂಟರ್‌ನ್ಯಾಶನಲ್ ಸ್ಕೂಲ್ ಆಡಳಿತಕ್ಕೂ ಇದೇ ರೀತಿಯ ಇಮೇಲ್‌ಗಳನ್ನು ಕಳುಹಿಸಲಾಗಿದೆ.
ಮಲಿಂದ ಬೊರೊನ್ ಇ-ಮೇಲ್ ಅಕೌಂಟ್ನಿಂದ ಇ-ಮೇಲ್ ಬಂದಿದ್ದು ‘ದಿಸ್ ಇಸ್ ನಾಟ್ ಜೋಕ್’ ಎಂದು ವಾರ್ನಿಂಗ್ ಮಾಡಿದ್ದಾರೆ.
ಇಮೇಲ್ ಸಿಕ್ಕ ಬಳಿಕ ಶಾಲೆ ವಿದ್ಯಾರ್ಥಿಗಳನೆಲ್ಲ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು ವಿಷಯ ತಿಳಿದು ಪೋಷಕರು ಶಾಲೆ ಬಳಿ ಓಡೋಡಿ ಬರುತ್ತಿದ್ದಾರೆ. ಮೇಲ್ ಮೂಲಕ ಐದು ಶಾಲೆಗಳಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದ್ದು ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಕಾರಣ ಶಾಲೆ ಮಕ್ಕಳಿಗೆ ಅತಂಕಗೊಳಸದೇ ಪೊಲೀಸರು ಶೋಧ ನಡೆಸುತ್ತಿದ್ದಾರೆ.