ಭೀಕರ ಅಪಘಾತ- ಹೊತ್ತಿ ಉರಿದ ಸಿಟಿ ಬಸ್ ಹಾಗೂ ಬೈಕ್
ಮಂಗಳೂರು, ಏ.8 : ನಗರದ ಹಂಪನಕಟ್ಟೆ ಬಳಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ತಗುಲಿ ನಡುರಸ್ತೆಯಲ್ಲೇ ಎರಡೂ ವಾಹನಗಳು ಹೊತ್ತಿ ಉರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಘಟನೆ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ದ್ವಿಚಕ್ರ ವಾಹನ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ಬಳ್ಳಾಲ್‌ಬಾಗ್ ನಿವಾಸಿ 26 ವರ್ಷದ ಯುವಕನಿಗೆ ಕಾಲಿಗೆ ಗಾಯವಾಗಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಬಸ್ಸು ಹಾಗೂ ದ್ವಿಚಕ್ರ ವಾಹನ ಬಹುತೇಕವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ಗುರುಪುರ ಕೈಕಂಬದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್ಸು ಸಿಗ್ನಲ್ ದಾಟಿ ಮುಂದೆ ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಘಟನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಅವರು, ಅಪಘಾತವಾಗಿ ಬೈಕ್ ಬಸ್ಸಿನ ಎದುರು ಭಾಗಕ್ಕೆ ಸಿಲುಕಿ ಬೆಂಕಿ ಹತ್ತಿಕೊಂಡಿರಬಹುದು. ಈ ಘಟನೆ ಕುರಿತಾಗಿ ಅಪಘಾತ ಹೇಗಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಘಟನೆಗೆ ಸಂಬಂಧಿಸಿ ಸಿಸಿಟಿವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.
ದ್ವಿಚಕ್ರ ವಾಹನದಲ್ಲಿ ಇಬ್ಬರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳಲ್ಲಿ ಕೆಲವರು ಹೇಳುತ್ತಿದ್ದು, ಮತ್ತೆ ಕೆಲವರು ಒಬ್ಬನೇ ಇದ್ದ ಎಂದು ಹೇಳುತ್ತಿದ್ದಾರೆ. ಅದೆಲ್ಲವನ್ನೂ ಪರಿಶೀಲಿಸಬೇಕಾಗಿದೆ. ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದು, ಬೆಂಕಿ ಹತ್ತಿಕೊಂಡ ತಕ್ಷಣ ಚಾಲಕ, ನಿರ್ವಾಹಕ ಸೇರಿದಂತೆ ಎಲ್ಲರೂ ಬಸ್ಸಿನಿಂದ ಇಳಿದಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ