| ನವದೆಹಲಿ ಎ.8: 2050 ರ ವೇಳೆಗೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಮುಂಬೈ ಸೇರಿದಂತೆ ದೇಶದ ಕರಾವಳಿ ಭಾಗದ ಪ್ರಮುಖ ಪ್ರದೇಶಗಳು ಮುಳುಗಡೆಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮಾಧ್ಯಮದ ವರದಿಯ ಪ್ರಕಾರ ಆರ್. ಎಂಎಸ್.ಐ ಗ್ಲೋಬಲ್ ರಿಸ್ಕ್ ಮ್ಯಾನೇಜ್ ಮೆಂಟ್ ಕಂಪನಿಯು ಈ ವಿಶ್ಲೇಷಣೆ ನಡೆಸಿದ್ದು, ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರ ಸಮಿತಿಯ (ಐಪಿಸಿಸಿ) 2021 ವರದಿಯನ್ನು ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ 2050ಕ್ಕೆ ಭಾರತದಲ್ಲಿ ಸಮುದ್ರ ಮಟ್ಟ ಭಾರೀ ಏರಿಕೆಯಾಗಲಿದೆ. ಚೆನ್ನೈ, ಮುಂಬೈ, ಕೊಚ್ಚಿ, ಮಂಗಳೂರು, ವೈಝಾಗ್ ಹಾಗೂ ತಿರುವನಂತಪುರ ಕರಾವಳಿ ನಗರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಹೈ-ರೆಸಲ್ಯೂಷನ್ ಡಿಜಿಟಲ್ ರೂಪದಲ್ಲಿ ಭೂಪ್ರದೇಶದ ಮಾದರಿಯನ್ನು ಸೃಷ್ಟಿಸಿ, ಸಮುದ್ರ ಮಟ್ಟ ಏರಿಕೆ ಮುನ್ನೆಚ್ಚರಿಕೆಗಳನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ.
ಹಿಂದೂ ಮಹಾಸಾಗರದ ಉತ್ತರದಲ್ಲಿ 1874ರಿಂದ 2004ರ ವರೆಗೂ ಪ್ರತಿ ವರ್ಷ ಸಮುದ್ರ ಮಟ್ಟ 1.06ರಿಂದ 1.75 ಮಿ.ಮೀ. ಏರಿಕೆಯಾಗಿದೆ. 1993-2017ರ ವರೆಗೂ ಪ್ರತಿ ವರ್ಷ 3.3 ಮಿ.ಮೀ ಏರಿಕೆಯಾಗಿದೆ. ಈ ಪ್ರಮಾಣ ಮುಂದೆ ಇನ್ನೂ ಹೆಚ್ಚಳವಾಗಲಿದ್ದು, ಮುಂಬೈನಲ್ಲಿ ಸುಮಾರು 998 ಕಟ್ಟಡಗಳು ಹಾಗೂ 24 ಕಿ.ಮೀ. ಉದ್ದದ ರಸ್ತೆ ಮಾರ್ಗಕ್ಕೆ 2050ರ ವೇಳೆಗೆ ಅಪಾಯ ಎದುರಾಗಲಿದೆ.
ಸಮುದ್ರ ಮಟ್ಟದಲ್ಲಿ ಹೆಚ್ಚಳವಾಗುವುದರಿಂದ ಚೆನ್ನೈನಲ್ಲಿ 55 ಕಟ್ಟಗಳು, 5 ಕಿ.ಮೀ. ರಸ್ತೆ ಮಾರ್ಗ ಅಪಾಯಕ್ಕೆ ಸಿಲುಕಲಿವೆ. ಕೊಚ್ಚಿಯಲ್ಲಿ 464 ಕಟ್ಟಡಗಳು, ತಿರುವನಂತರಪುರದಲ್ಲಿ 349 ಕಟ್ಟಡಗಳು ಹಾಗೂ ವಿಶಾಖಪಟ್ಟಣದಲ್ಲಿ 206 ಕಟ್ಟಡಗಳು ಮತ್ತು 9 ಕಿ.ಮೀ. ದೂರದ ರಸ್ತೆ ಸಂಪರ್ಕ ವ್ಯವಸ್ಥೆ ಮುಳುಗಿ ಹೋಗುವ ಸಾಧ್ಯತೆ ಇದೆ. ಹಾಗೂ ಹಾಜಿ ಅಲಿ ದರ್ಗಾ, ಜವಾಹರ್‍ಲಾಲ್ ನೆಹರೂ ಪೋರ್ಟ್ ಟ್ರಸ್ಟ್, ವೆಸ್ಟರ್ನ್ ಎಕ್ಸ್‍ಪ್ರೆಸ್ ಹೈವೇ, ಬಾಂದ್ರಾ-ವೊರ್ಲಿ ಸಮುದ್ರ ಸಂಪರ್ಕ ವ್ಯವಸ್ಥೆ ಹಾಗೂ ಮೆರಿನ್ ಡ್ರೈವ್‍ನಲ್ಲಿನ ಕ್ವೀನ್ಸ್ ನೆಕ್ಲೆಸ್ ಸೇರಿ ಮುಂಬೈನ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುವ ಅಪಾಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. | |
ಹಾಗಿಂದೆಲ್ಲ ಸುಮಾರ್ ಬಂದ್ ಹೋಯ್ತ್.