| ಮಲ್ಪೆ: ಪ್ರತಿದಿನ ಉಡುಪಿ ಹಾಗೂ ಮಲ್ಪೆ ಬೀಚ್ ಗೆ ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಅವರಿಗೆ ಭದ್ರತೆ ಮತ್ತು ಸಲಹೆ ಸೂಚನೆ ಕೊಡುವಲ್ಲಿ ಮಲ್ಪೆ ಬೀಚ್ ಅನ್ನು ನಿರ್ವಹಣೆಗಾಗಿ ಗುತ್ತಿಗೆ ಪಡೆದಿರುವ ಟೆಂಡರ್ ದಾರರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಆರೋಪಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸಿಗರಿಗೆ ಸೂಕ್ತ ಸಲಹೆ ಸೂಚನೆ ನೀಡಬೇಕು. ಲೈಫ್ ಜಾಕೇಟ್ ಕೊಡಬೇಕೆಂಬ ಇತ್ಯಾದಿ ನಿಯಮಗಳನ್ನು ಬೀಚ್ ಅಭಿವೃದ್ಧಿ ಸಮಿತಿ ರೂಪಿಸಿದೆ. ಆದರೆ ಬೀಚ್ ಅಭಿವೃದ್ಧಿ ಸಮಿತಿಯ ಕಾನೂನುಗಳನ್ನು ಟೆಂಡರ್ ದಾರರು ಗಾಳಿಗೆ ತೂರಿ, ತಮ್ಮ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ.
ಇದನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು. ಟೆಂಡರ್ ದಾರರ ನಿರ್ಲಕ್ಷ ದಿಂದಾಗಿ ಇಂದು ಮೂರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದಾರೆ. ಈ ಹಿಂದೆಯೂ ಹಲವು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ಇದಕ್ಕೆ ಗುತ್ತಿಗೆದಾರರೇ ನೇರ ಹೊಣೆ. ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. | |