ರಸ್ತೆ ಅಪಘಾತ ಸಾವಿನ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನ!

ಹೊಸದಿಲ್ಲಿ ಎ.7: ರಸ್ತೆ ಅಪಘಾತ ಸಾವಿನ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂಬ ಅಘಾತಕಾರಿ ವಿಷಯವೊಂದು ಬಯಲಾಗಿದೆ. 

ಇಂಟರ್ನ್ಯಾಷನಲ್ ರೋಡ್ ಫೆಡರೇಶನ್, ಜಿನೀವಾ ಬಿಡುಗಡೆ ಮಾಡಿದ ರಸ್ತೆ ಅಪಘಾತಗಳ ಸಾವು ನೋವಿನ ಅಂಕಿಅಂಶಗಳ ವರದಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ವರದಿಯಂತೆ ರಸ್ತೆ ಅಪಘಾತಗಳಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸಾವು ಸಂಭವಿಸುವ ದೇಶ ಭಾರತ. ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರತ 1ನೇ ಸ್ಥಾನದಲ್ಲಿದೆ ಮತ್ತು ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ ಜಾಗತಿಕವಾಗಿ ಭಾರತ 3ನೇ ಸ್ಥಾನದಲ್ಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನಿನ್ನೆ ರಾಜ್ಯಸಭೆಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಭಾರತದಲ್ಲಿ 3,54,796 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,33,201 ಜನರು ಸಾವನ್ನಪ್ಪಿದ್ದಾರೆ ಮತ್ತು 3,35,201 ಜನರು ಗಾಯಗೊಂಡಿದ್ದಾರೆ.ಈ ಅಂಕಿಅಂಶಗಳ ಪ್ರಕಾರ, 60% ಕ್ಕಿಂತ ಹೆಚ್ಚು ರಸ್ತೆಅಪಘಾತಗಳಲ್ಲಿ 75,333 ಸಾವುಗಳು ಮಿತಿಮೀರಿದ ವೇಗದಿಂದ ಉಂಟಾಗಿವೆ ಮತ್ತು ಇದರಲ್ಲಿ 2,09,736 ಜನರು ಗಾಯಗೊಂಡಿದ್ದಾರೆ.

ರಸ್ತೆ ಅಪಘಾತಗಳಿಗೆ ಬಲಿಯಾದವರಲ್ಲಿ 43.6% ದ್ವಿಚಕ್ರ ವಾಹನ ಸವಾರರು, 13.2% ಕಾರುಗಳು, 12.8% ಟ್ರಕ್‌ಗಳು ಮತ್ತು 3.1% ಬಸ್‌ಗಳಲ್ಲಿ ಸವಾರಿ ಮಾಡುವವರು ಹಾಗೂ ಚಾಲಕರು ಇದ್ದಾರೆ ಎಂದು ವರದಿ ಹೇಳಿದೆ. 24.3 ಪ್ರತಿಶತ ರಸ್ತೆ ಅಪಘಾತಗಳು ಅಪಾಯಕಾರಿ ಚಾಲನೆ ಅಥವಾ ಅಜಾಗರೂಕ ಚಾಲನೆ ಅಥವಾ ಓವರ್‌ಟೇಕಿಂಗ್ ನಿಂದ ಸಂಭವಿಸಿದ್ದು ಇದರಲ್ಲಿ 35,219 ಸಾವುಗಳು ಮತ್ತು 77,067 ಜನರು ಗಾಯ ಗೊಂಡಿದ್ದಾರೆ. ಕೇವಲ 2.4% ರಸ್ತೆ ಅಪಘಾತಗಳು ಕಳಪೆ ಹವಾಮಾನದ ಕಾರಣದಿಂದ ಸಂಭವಿಸಿವೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ.

Leave a Reply

Your email address will not be published. Required fields are marked *

error: Content is protected !!